ಶಿವಮೊಗ್ಗ ದುರಂತ: ಸ್ಫೋಟಕ ವಸ್ತುಗಳನ್ನು ಆಂಧ್ರಪ್ರದೇಶ ರಾಜ್ಯದಿಂದ ತಂದಿರಬಹುದು- ಸಚಿವ ಆರ್.ಅಶೋಕ್
ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ ವಸ್ತುಗಳನ್ನು ಆಂಧ್ರಪ್ರದೇಶದಿಂದ ತಂದಿರಬಹುದು ಎಂದು ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.
Published: 25th January 2021 07:44 AM | Last Updated: 25th January 2021 12:46 PM | A+A A-

ಸಂಗ್ರಹ ಚಿತ್ರ
ಶಿವಮೊಗ್ಗ: ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ ವಸ್ತುಗಳನ್ನು ಆಂಧ್ರಪ್ರದೇಶದಿಂದ ತಂದಿರಬಹುದು ಎಂದು ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟಕ ತುಂಬಿದ ಲಾರಿ ಕರ್ನಾಟಕಕ್ಕೆ ಹೇಗೆ ಬಂದಿತು, ಶಿವಮೊಗ್ಗದವರೆಗೂ ಹೇಗೆ ತಲುಪಿತ್ತು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈಗಾಗಲೇ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಸ್ಫೋಟ ವಸ್ತುಗಳನ್ನು ಆಂಧ್ರಪ್ರದೇಶದಿಂದ ತಂದಿರಬಹುದು. ಇಂತಹ ಸ್ಫೋಟಕ ವಸ್ತುಗಳು ರಾಜ್ಯದಲ್ಲಿ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಎಷ್ಟು ಪ್ರಮಾಣದ ಸ್ಫೋಟಕ ವಸ್ತುಗಳನ್ನು ತರಲಾಗಿತ್ತು ಎಂಬುದು ತನಿಖೆಯಿಂದ ತಿಳಿದುಬರಲಿದೆ. ಸ್ಫೋಟಕ ವಸ್ತುಗಳು ಮೈನಿಂಗ್ ಉದ್ದೇಶಕ್ಕಾಗಿ ಬಂದಿದೆ. ಬೇರೆ ಉದ್ದೇಶಕ್ಕಾಗಿ ಬಂದಿಲ್ಲ. ಹಾಗೆ ಬಂದ್ದಿದ್ದರೇ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಸ್ಫೋಟಕ ಯಾರು ತರಿಸುತ್ತಾರೆ ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಲಾಗುತ್ತದೆ.
ಇದೇ ವೇಳೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ರಾಜ್ಯದ ಪೊಲೀಸರೇ ಸಮರ್ಥರಿದ್ದಾರೆ. ಅವರೇ ತನಿಖೆ ನಡೆಸಲಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಬಳಿಕ ಕಂದಾಯ ಇಲಾಖೆಯ ರಾಜ್ಯ ಪ್ರಕೃತಿ ವಿಕೋಪ ಇಲಾಖೆಯು ತಂಡವನ್ನು ಘಟನಾ ಸ್ಥಳಕ್ಕೆ ಕಳಿಸಿಕೊಟ್ಟಿದ್ದೇನೆ. ಸ್ಫೋಟಕ ಸಾಮಾಗ್ರಿಗಳನ್ನು ಕೊಳ್ಳಲು ಇನ್ನಷ್ಟು ಬಿಗಿ ಕಾನೂನು ರೂಪಿಸಲಾಗುತ್ತದೆ. ಅನೇಕ ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿದ್ದು, ಇವುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.