ಶಿವಮೊಗ್ಗ ಗಣಿ ಸ್ಫೋಟ ದುರಂತ: ಮೃತರ ಕುಟುಂಬಸ್ಥರಿಗೆ ಅವರು ಯಾವ ಕೆಲಸ ಮಾಡುತಿದ್ದರೆಂಬ ಮಾಹಿತಿಯೇ ಇರಲಿಲ್ಲ!
ಜೀವನದ ಬಂಡಿಯನ್ನು ಸಾಗಿಸಲು ಹೊತ್ತಿನ ಊಟಕ್ಕಾಗಿ ದೂರದೂರುಗಳಿಂದ ಬಂದು ಬದುಕನ್ನು ಸಾಗಿಸುತ್ತಿರುವ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಜ.21 ರಂದು ಇಲ್ಲಿನ ಹುಣಸೋಡಿನಲ್ಲಿ ಸಂಭವಿಸಿದ ಭೀಕರ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ ಒಬ್ಬೊಬ್ಬ ಕಾರ್ಮಿಕರ ಕಥೆ ಒಂದೊಂದು ರೀತಿಯಲ್ಲಿದೆ.
Published: 25th January 2021 08:44 AM | Last Updated: 25th January 2021 12:53 PM | A+A A-

ಸಂಗ್ರಹ ಚಿತ್ರ
ಶಿವಮೊಗ್ಗ: ಜೀವನದ ಬಂಡಿಯನ್ನು ಸಾಗಿಸಲು ಹೊತ್ತಿನ ಊಟಕ್ಕಾಗಿ ದೂರದೂರುಗಳಿಂದ ಬಂದು ಬದುಕನ್ನು ಸಾಗಿಸುತ್ತಿರುವ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಜ.21 ರಂದು ಇಲ್ಲಿನ ಹುಣಸೋಡಿನಲ್ಲಿ ಸಂಭವಿಸಿದ ಭೀಕರ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ ಒಬ್ಬೊಬ್ಬ ಕಾರ್ಮಿಕರ ಕಥೆ ಒಂದೊಂದು ರೀತಿಯಲ್ಲಿದೆ.
ಕುಟುಂಬಕ್ಕೆ ಆಧಾರವಾಗಿದ್ದವರೇ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇನ್ನು ಘಟನೆಯಲ್ಲಿ ಮೃತ ಕಾರ್ಮಿಕನೊಬ್ಬನ ಕಥೆ ಎಂತಹ ಕಲ್ಲು ಹೃದಯವೂ ಕರಗುವಂತೆ ಮಾಡುತ್ತದೆ.
ಶಿವಮೊಗ್ಗ ಕ್ರಷನ್ ಗಣಿ ಸ್ಫೋಟ ದುರಂತದಲ್ಲಿ ಈ ಪೈಕಿ ಅಂತರಗಂಗೆ ತಾಪಂ ವ್ಯಾಪ್ತಿಯ ಉಕ್ಕುಂದ ಕ್ರಾಸ್ ನಿವಾಸಿ ಮಂಜುನಾಥ(38) ಮತ್ತು ಬಸವನಗುಡಿ ಮೊದಲನೇ ಕ್ರಾಸ್ ನಿವಾಸಿ ಪ್ರವೀಣ್ಕುಮಾರ್(40) ಮೃತಪಟ್ಟಿದ್ದಾರೆ.
ಮಂಜುನಾಥ್ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತಾಯಿ, ಪತ್ನಿ ಹಾಗೂ 4 ವರ್ಷದ ಹೆಣ್ಣು ಮಗು ಮತ್ತು 15 ವರ್ಷದ ಗಂಡು ಮಗು, 4 ಜನ ಸಹೋದರಿಯರೊಂದಿಗೆ ಸಂಸಾರ ಸರಿದೂಗಿಸುತ್ತಿದ್ದು, ಕುಟುಂಬಕ್ಕೆ ಅವರೇ ಆಧಾರವಾಗಿದ್ದರು.
ಸಾವಿನ ಸುದ್ದಿ ತಿಳಿಯುತ್ತಿದ್ದದಂತೆ ಈತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಜುನಾಥ್ ಹುಣಸೋಡು ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿರುವ ಬಗ್ಗೆ ನಿಖರವಾದ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಮಂಜುನಾಥ್ ಯಾವ ಕೆಲಸಕ್ಕೆ ಹೋಗುತ್ತಿದ್ದರು ಎಂಬ ಮಾಹಿತಿಯೇ ಅವರ ಕುಟುಂಬಕ್ಕೆ ತಿಳಿದಿರಲಿಲ್ಲ.
ಮತ್ತೊಬ್ಬ ಮೃತರಾದ ಪ್ರವೀಣ್ಕುಮಾರ್ ಸಹ ತಾಯಿ, ಪತ್ನಿ ಹಾಗೂ 6 ವರ್ಷದ ಗಂಡು ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಪ್ರವೀಣ್ ಅವರ ಪತ್ನಿ ಮತ್ತೊಂದು ಗಂಡುವಿಗೆ ಜನ್ಮ ನೀಡಿದ್ದರು. ಇನ್ನು ಕೆಲವೇ ದಿನಗಳಲ್ಲಿ ಮಗುವಿಗೆ ನಾಮಕರಣ ಮಾಡಬೇಕಿತ್ತು. ಅಷ್ಟರಲ್ಲಾಗಲೇ ದುರಂತದಲ್ಲಿ ಪ್ರವೀಣ್ ಅವರು ದುರ್ಮರಣವನ್ನಪ್ಪಿದ್ದಾರೆ.
ಪ್ರವೀಣ್ ಅವರ ಕುರಿತು ಅವರ ಕುಟುಂಬಸ್ಥರನ್ನು ಕೇಳಿದಾಗ, ತಮಗೇನೂ ಗೊತ್ತಿಲ್ಲ ಎಂದು ದುಃಖದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಮೊದಲು ಹಾಲಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಪ್ರವೀಣ್ ಬಳಿಕ ಸ್ವಂತ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಇತರ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಸದ್ಯ ಮೃತರ ಬಗ್ಗೆ ತನಿಖೆಯಿಂದಷ್ಟೇ ಇನ್ನೂ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಕಲ್ಲು ಗಣಿಗಾರಿಕೆ ಕೆಲಸಕ್ಕೆ ಕರೆದುಕೊಂಡು ಹೋದವರು ಯಾರು? ಹೇಗೆ ಹೋದರು? ಎಷ್ಟುದಿನದಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಈಗಾಗಲೇ ಸರ್ಕಾರ ರೂ.5 ಲಕ್ಷ ಪರಿಹಾರ ನೀಡಿದ್ದು, ಈ ಹಣ ಕುಟುಂಬದ ನಿರ್ವಹಣೆಗೆ ಸಾಕಾಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ದುರಂತದಲ್ಲಿ ಸಾವನ್ನಪ್ಪಿದ್ದ ಹಲವರಿಗೆ ತಾವು ಎಂತಹ ಅಪಾಯದಲ್ಲಿ ಸಿಲುಕಿ ಕೆಲಸ ಮಾಡುತ್ತಿದ್ದೇವೆಂಬ ಅರಿವೇ ಇರಲಿಲ್ಲ ಎನ್ನಲಾಗಿದೆ. ನಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದವರನ್ನು ನಾವು ಕಳೆದುಕೊಂಡಿದ್ದೇವೆ. ನಮ್ಮವರನ್ನು ಇಂತಹ ಅಪಾಯದ ಕೆಲಸಕ್ಕೆ ಸೇರಿಸಿಕೊಂಡಿದ್ದ ಕ್ರಷಿಂಗ್ ಘಟಕ ನಮಗೆ ಸಹಾಯ ಮಾಡುತ್ತದೆಯೇ ಎಂದು ಮೃತರ ಕುಟುಂಬಸ್ಥರು ಪ್ರಶ್ನಿಸುತ್ತಿದ್ದಾರೆ.