ಕೋವ್ಯಾಕ್ಸಿನ್ ಲಸಿಕೆ ಒಪ್ಪಿಗೆ ಪತ್ರ ಕನ್ನಡಕ್ಕೆ ತರ್ಜುಮೆ ಮಾಡಿ: ಭಾರತ್ ಬಯೋಟೆಕ್'ಗೆ ಆರೋಗ್ಯ ಇಲಾಖೆ ಸೂಚನೆ
ಕೋವ್ಯಾಕ್ಸಿನ್ ಲಸಿಕೆ ಒಪ್ಪಿಗೆ ಪತ್ರ ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು, ಈ ಸಂಬಂಧ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಶೀಘ್ರಗತಿಯಲ್ಲಿ ಕನ್ನಡ ಭಾಷೆಯಲ್ಲು ಲಭ್ಯವಾಗುವಂತೆ ಮಾಡಲು ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್'ಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
Published: 25th January 2021 09:07 AM | Last Updated: 25th January 2021 09:43 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೋವ್ಯಾಕ್ಸಿನ್ ಲಸಿಕೆ ಒಪ್ಪಿಗೆ ಪತ್ರ ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು, ಈ ಸಂಬಂಧ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಶೀಘ್ರಗತಿಯಲ್ಲಿ ಕನ್ನಡ ಭಾಷೆಯಲ್ಲು ಲಭ್ಯವಾಗುವಂತೆ ಮಾಡಲು ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್'ಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು, ಲಸಿಕೆ ಒಪ್ಪಿಗೆ ಪತ್ರ ಕನ್ನಡಕ್ಕೆ ಅನುವಾದ ಮಾಡುವ ಕೆಲಸವನ್ನು ಭಾರತ್ ಬಯೋಟೆಕ್ ಮಾಡುತ್ತಿದೆ. ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಶೀಘ್ರಗತಿಯಲ್ಲಿ ಎಲ್ಲಾ ಜಿಲ್ಲೆಗಳಿಗೂ ರವಾನಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ಲಸಿಕೆ ಪಡೆದ ಹಲವರಿಗೆ ಈ ಒಪ್ಪಿಗೆ ಪತ್ರವನ್ನೇ ನೀಡಿಲ್ಲ, ಸಹಿ ಮಾಡಿಸಿಕೊಂಡಿಲ್ಲ. ಪತ್ರದ ಕುರಿತು ನಮಗೆ ಮಾಹಿತಿಯೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.ಈ ಆರೋಪವನ್ನು ಸರ್ಕಾರ ನಿರಾಕರಿಸಿದೆ.
ಲಸಿಕೆ ಪಡೆದ ಪ್ರತೀಯೊಬ್ಬ ವ್ಯಕ್ತಿಗೂ ಅವರಿಗೆ ನೀಡಲಾಗುತ್ತಿರುವ ಲಸಿಕೆ ಕುರಿತು ಮಾಹಿತಿ ನೀಡಲಾಗಿರುತ್ತದೆ. ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ನೀಡುತ್ತಿರುವ ಕುರಿತು ಹಾಗೂ ಎರಡನೇ ಡೋಸ್ ನೀಡುವ ದಿನಾಂಕವನ್ನೂ ತಿಳಿಸಲಾಗಿರುತ್ತದೆ. ಇಂತಹ ಸುದ್ದಿಗಳು ಜನರನ್ನು ತಪ್ಪು ಹಾದಿಗೆಳೆಯುತ್ತದೆ ಅಲ್ಲದೇ, ಆರೋಗ್ಯ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಇಲಾಖೆ ತಿಳಿಸಿದೆ.