
ಸಿಎಂ ಯಡಿಯೂರಪ್ಪ
ಕಲಬುರಗಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲ ಆಡಿಯೋ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಕಲಬುರಗಿ ಹೈಕೋರ್ಟ್ ನ್ಯಾಯಾಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ಪೀಠ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ.
ಜನಪ್ರತಿನಿಧಿಗಳಿಗಾಗಿಯೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದ್ದು, ಹೀಗಾಗಿ ಅಲ್ಲಿಗೇ ವರ್ಗಾಯಿಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ವಿರುದ್ಧದ ಪ್ರಕರಣ ಇಂದು ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಬೇಕಿತ್ತು. ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿರುವುದರಿಂದ ಮುಂದಿನ ವಾರ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.
ತಮ್ಮ ತಂದೆಯ ಕಡೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಆಮಿಷವೊಡ್ಡಲಾಗಿತ್ತು ಎಂದು ಆರೋಪಿಸಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಪಾಟೀಲ ಕಂದಕೂರ ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರಂಭಿಸಿದ ತನಿಖೆಗೆ ಕಲಬುರ್ಗಿ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರೆವುಗೊಳಿಸುವಂತೆ ಶರಣಗೌಡ ಪಾಟೀಲ ಕಂದಕೂರರಿಂದ ಮೇಲ್ಮನವಿ ಸಲ್ಲಿಕೆಯಾಗಿತ್ತು.
ಆಪರೇಷನ್ ಕಮಲ ಆಡಿಯೋ ಪ್ರಕರಣ ದಾಖಲಾಗಿದ್ದಾಗ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಸಿಎಂ ಆಗಿದ್ದಾರೆ. ದೇವದುರ್ಗ ಗೆಸ್ಟ್ ಹೌಸ್ ಗೆ ತನ್ನನ್ನು ಕರೆಯಿಸಿಕೊಂಡು ಚುನಾವಣಾ ಖರ್ಚಿಗಾಗಿ 10 ಕೋಟಿ ರೂಪಾಯಿ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿ ತಮ್ಮ ತಂದೆಯ ಕಡೆಯಿಂದ ರಾಜೀನಾಮೆ ಕೊಡಿಸುವಂತೆ ಒತ್ತಡ ಹಾಕಿದ್ದರು ಎಂದು ಶರಣಗೌಡ ಪಾಟೀಲ್ ಆರೋಪಿಸಿದ್ದರು.