ಮಾದಕ ವಸ್ತುಗಳ ಪಟ್ಟಿಗೆ ಅಡಿಕೆ ಬೆಳೆ ಸೇರ್ಪಡೆ: ಬಿಜೆಪಿ ಶಾಸಕರ ಆಕ್ರೋಶ, ಕೈಬಿಡಲು ಆಗ್ರಹ

ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ನಲ್ಲಿ ಅಡಿಕೆ ಬೆಳೆಯನ್ನು ಡ್ರಗ್ಸ್‌ ಆ್ಯಂಡ್ ನಾರ್ಕೊಟಿಕ್‌ ವಿಭಾಗದಲ್ಲಿ ಸೇರಿಸಲಾಗಿದ್ದು, ಇದರಿಂದ ಅಡಿಕೆ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ.

Published: 29th January 2021 05:56 PM  |   Last Updated: 29th January 2021 05:56 PM   |  A+A-


Vidhana Sabha

ವಿಧಾನಸಭೆ

Posted By : Lingaraj Badiger
Source : UNI

ಬೆಂಗಳೂರು: ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ನಲ್ಲಿ ಅಡಿಕೆ ಬೆಳೆಯನ್ನು ಡ್ರಗ್ಸ್‌ ಆ್ಯಂಡ್ ನಾರ್ಕೊಟಿಕ್‌ ವಿಭಾಗದಲ್ಲಿ ಸೇರಿಸಲಾಗಿದ್ದು, ಇದರಿಂದ ಅಡಿಕೆ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ತಕ್ಷಣ ಅದನ್ನು ವೆಬ್‌ಸೈಟ್‌ನಿಂದ ತೆಗೆಯಬೇಕು ಮತ್ತು ಈ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಹಲವು ಶಾಸಕರು ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಹರತಾಳು ಹಾಲಪ್ಪ, ರಾಜ್ಯದ ದೊಡ್ಡ ಸಂಖ್ಯೆಯ ರೈತರು ಬೆಳೆಯುತ್ತಿರುವ ಅಟಿಕೆಯನ್ನು ಮಾದಕ ವಸ್ತುವಿನ ವಿಭಾಗದಲ್ಲಿ ಸೇರಿಸಿರುವುದು ಯಾರು? ಸರ್ಕಾರದ ಸೂಚನೆಯ ಮೇರೆಗೆ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆಯೇ? ಅಥವಾ ಅಧಿಕಾರಿಗಳೇ ಈ ತೀರ್ಮಾನ ತೆಗೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು. 

ಈ ವಿಷಯ ಜನರಿಗೆ ತಿಳಿದಿದ್ದರಿಂದ ಒಂದೇ ದಿನದಲ್ಲಿ ಅಡಿಕೆಯ ಧಾರಣೆ 5 ಸಾವಿರ ರೂ.ಗಳಷ್ಟು ಕಡಿಮೆ ಆಗಿದೆ. ಈಗ ಅಡಿಕೆ ಕೊಯಿಲಿನ ಸಮಯ. ಅಡಿಕೆ ಕೊಯಿಲಿಗೆ ಬಂದಾಗಲೇ ಇಂತಹ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಬೆಲೆ ಕುಸಿದು ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ಷೇಪಿಸಿದರು. 

ಇದಕ್ಕೆ ಧ್ವನಿಗೂಡಿಸಿದ ಆರಗ ಜ್ಞಾನೇಂದ್ರ, ವೆಬ್‌ಸೈಟ್‌ನಲ್ಲಿ ಅಡಿಕೆಯನ್ನು ಸೇರಿಸಿದ ಮಹಾನುಭವರು ಯಾರು ಎಂಬ ಬಗ್ಗೆ ತನಿಖೆ ನಡೆಸಬೇಕು. ಇದು ಬೆಲೆ ಕೈಗೆ ಬರುವ ಸಂದರ್ಭದಲ್ಲಿ ಅದರ ಧಾರಣೆ ಇಳಿಸಲು ನಡೆಸುವ ವ್ಯವಸ್ಥಿತ ಪಿತೂರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಡಾಳು ವಿರೂಪಾಕ್ಷಪ್ಪ, ಎಂ.ಪಿ.ಕುಮಾರಸ್ವಾಮಿ ಮತ್ತಿತರರು ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಪಿಎಂಸಿ ಸಚಿವರ ಗಮನಕ್ಕೆ ತಂದು ಈ ಲೋಪ ಸರಿಪಡಿಸಲಾಗುವುದು. ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp