ಮೆಟ್ರೋ ರೈಲು ಆಸನಗಳ ಪೂರ್ಣಪ್ರಮಾಣ ಬಳಕೆಗೆ ಅನುಮತಿ ನೀಡಿ: ಕೇಂದ್ರಕ್ಕೆ ಬಿಎಂಆರ್'ಸಿಎಲ್ ಪತ್ರ
ಮೆಟ್ರೋ ರೈಲುಗಳಲ್ಲಿನ ಆಸನಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಮನವಿ ಮಾಡಿಕೊಂಡಿದೆ.
Published: 29th January 2021 10:06 AM | Last Updated: 29th January 2021 10:06 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮೆಟ್ರೋ ರೈಲುಗಳಲ್ಲಿನ ಆಸನಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಮನವಿ ಮಾಡಿಕೊಂಡಿದೆ.
ಈ ಕುರಿತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಪತ್ರ ಬರೆದಿದೆ. ಕೊರೋನಾ ನಿಯಮಗಳನ್ನು ಸಡಿಲಿಕೆ ಮಾಡಿದ ಬಳಿಕ ಸೆಪ್ಟೆಂಬರ್ 7,2020ರಂದು ಮೆಟ್ರೋ ರೈಲುಗಳ ಸಂಚಾರ ಪುನರಾರಂಭಿಸಲಾಗಿತ್ತು. ಈ ವೇಳೆ ಕೇಂದ್ರ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.
300 ಆಸನಗಳ ಸಾಮರ್ಥ್ಯವುಳ್ಳ ಜಾಗದಲ್ಲಿ ಕೇವಲ 150 ಪ್ರಯಾಣಿಕರು ಮಾತ್ರ ಕುಳಿತುಕೊಳ್ಳಬೇಕು. ನಿಂತು ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಸೇರಿ ಒಂದು ಮೆಟ್ರೋ ರೈಲಿನಲ್ಲಿ 1,800 ಮಂದಿ ಪ್ರಯಾಣಿಸಬೇಕೆಂದು ತಿಳಿಸಿತ್ತು.
ಇದೀಗ ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಬದಲಾವಣೆ ಮಾಡುವ ಆಗತ್ಯವಿದೆ. ಮೆಟ್ರೋ ರೈಲಿನಲ್ಲಿ ಎಲ್ಲಾ ಸೀಟುಗಳನ್ನು ಬಳಕೆ ಮಾಡಲು ಅನುಮತಿ ನೀಡುವಂತೆ ಕೋರಿ ಬಿಎಂಆರ್'ಸಿಎಲ್ ಕೇಂದ್ರಕ್ಕೆ ಪತ್ರ ಬರೆದಿದೆ.
ಮೆಟ್ರೋ ರೈಲಿನಲ್ಲಿ ಆಸನಗಳನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿದ್ದೇ ಆದರೆ, ಪ್ರಯಾಣಿಕರು ನಿಲ್ಲುವ ಸ್ಥಳದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆಯ ನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್ ಅವರು ಮಾತನಾಡಿ, ಮೆಟ್ರೋದಲ್ಲಿ ಪ್ರತೀನಿತ್ಯ ಸುಮಾರು 1.3 ಲಕ್ಷದಿಂದ 1.4 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ, ಭಾನುವಾರ ಈ ಸಂಖ್ಯೆ 75,000ಕ್ಕೆ ಇಳಿಕೆಯಾಗುತ್ತದೆ. ಮೆಟ್ರೋ ರೈಲಿನ ಒಟ್ಟಾರೆ ಸರಾಸರಿ ಪ್ರಯಾಣಿಕರ ಸಂಖ್ಯೆ 1.1 ಲಕ್ಷ ಇದೆ. ಜನವರಿ 27 ರಂದು 1.47 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಇಳಿಯುತ್ತಿರುವುದು, ನಿಯಮಗಳ ಸಡಿಲಿಕೆ ಹಾಗೂ ಶೈಕ್ಷಣಿಕ ಸಂಸ್ಥೆಗಳು ತೆರೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ರೈಲಿನಲ್ಲಿನ ಆಸನಗಳನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಜನದಟ್ಟಣೆ ಸಮಸ್ಯೆ ಬಗೆಹರಿಸಬಹುದಾಗಿದೆ. ಆಸನಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ನಿಂತುಕೊಳ್ಳುವ ಜನರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಜನರು ಮೆಟ್ರೋದಲ್ಲಿ ಸಂಚಾರ ಮಾಡಲು ಮನಸ್ಸು ಮಾಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.