ಯುವಜನತೆಯಲ್ಲಿ ಒಲವು-ಅರಿವು ಮೂಡಿಸಲು ಕೃಷಿ ಇಲಾಖೆ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್: ಸಚಿವ ಬಿ ಸಿ ಪಾಟೀಲ್
ಕೃಷಿ ಕಾಯ್ದೆ ಬಗ್ಗೆ ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಈ ಮಧ್ಯೆ ರಾಜ್ಯ ಕೃಷಿ ಇಲಾಖೆ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆತಂದು ರಾಯಭಾರಿಯನ್ನಾಗಿ ಮಾಡಿಕೊಂಡು ರೈತರಲ್ಲಿ, ಯುವಜನತೆಯಲ್ಲಿ ಕೃಷಿ ಕೆಲಸದ ಬಗ್ಗೆ ಉತ್ತೇಜನ ನೀಡುವ ಕಾರ್ಯಕ್ಕೆ ಮುಂದಾಗಿದೆ.
Published: 31st January 2021 01:05 PM | Last Updated: 31st January 2021 01:05 PM | A+A A-

ನಟ ದರ್ಶನ್
ಬೆಂಗಳೂರು: ಕೃಷಿ ಕಾಯ್ದೆ ಬಗ್ಗೆ ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಈ ಮಧ್ಯೆ ರಾಜ್ಯ ಕೃಷಿ ಇಲಾಖೆ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆತಂದು ರಾಯಭಾರಿಯನ್ನಾಗಿ ಮಾಡಿಕೊಂಡು ರೈತರಲ್ಲಿ, ಯುವಜನತೆಯಲ್ಲಿ ಕೃಷಿ ಕೆಲಸದ ಬಗ್ಗೆ ಉತ್ತೇಜನ ನೀಡುವ ಕಾರ್ಯಕ್ಕೆ ಮುಂದಾಗಿದೆ.
ನಟ ದರ್ಶನ್ ಮೂಲತಃ ಕೃಷಿಕರು, ಮೈಸೂರು ಬಳಿ ಅವರದ್ದೇ ಫಾರ್ಮ್ ಹೌಸ್ ಇದೆ, ಅದರಲ್ಲಿ ಕೃಷಿ ಮಾಡುತ್ತಾರೆ, ನೂರಾರು ಪ್ರಾಣಿ-ಪಕ್ಷಿಗಳನ್ನು ಸಾಕುತ್ತಾರೆ, ಬಿಡುವಿದ್ದಾಗಲೆಲ್ಲ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಾರೆ. ಅವರಿಗೆ ಕೃಷಿಯಲ್ಲಿರುವ ಆಸಕ್ತಿ, ಜ್ಞಾನ ನೋಡಿಕೊಂಡು ಕರ್ನಾಟಕ ಜನತೆಗೆ ಅವರು ಚಿರಪರಿಚಿತವಾಗಿರುವುದರಿಂದ ಸರ್ಕಾರ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.
ಕೃಷಿ ಇಲಾಖೆಗೆ ರಾಯಭಾರಿಯಾದ ಖುಷಿ ದರ್ಶನ್ ಅವರಿಗೂ ಇದೆ.ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ. ಸರ್ಕಾರದ ಕೃಷಿ ಯೋಜನೆಗಳು, ಕಾರ್ಯಕ್ರಮಗಳು ರೈತರಿಗೆ ತಲುಪಲು ಸಾಧ್ಯವಾದಷ್ಟು ಪ್ರಚಾರ ನೀಡುತ್ತೇನೆ ಎನ್ನುತ್ತಾರೆ. ಕೃಷಿ ಇಲಾಖೆಯ ರಾಯಭಾರಿಯಾಗುತ್ತೀರಾ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರೇ ಖುದ್ದು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡ ದರ್ಶನ್ ಇದಕ್ಕೆ ಯಾವುದೇ ಸಂಭಾವನೆ ಸರ್ಕಾರದಿಂದ ಪಡೆದಿಲ್ಲ ಎಂಬುದು ವಿಶೇಷ.
ಈ ಪ್ರಕ್ರಿಯೆಗೆ ನಿನ್ನೆ ಅಂತಿಮ ರೂಪ ನೀಡಲಾಯಿತು. ಕೃಷಿ ಇಲಾಖೆಯ ಆಯುಕ್ತರು ಸರ್ಕಾರದ ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಇಲಾಖೆಯ ರಾಯಭಾರಿಯಾಗಿ ದರ್ಶನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇಂದಿನ ಹಲವು ಯುವಕರು ಓದಿ ನಗರಗಳಿಗೆ ಕೆಲಸಕ್ಕೆ ವಲಸೆ ಹೋಗುತ್ತಾರೆ, ಊರಿನಲ್ಲಿ ಸಾಕಷ್ಟು ಸ್ವಂತ ಜಮೀನು, ಕೃಷಿ ಇದ್ದರೂ ಯುವಜನತೆ ಒಲವು ತೋರಿಸುವುದಿಲ್ಲ. ಅಂತವರಿಗೆ ಕೃಷಿ ಎಷ್ಟು ಪ್ರಯೋಜನಕಾರಿ ಎಂದು ಅರಿವು ಮೂಡಿಸಬೇಕು. ರಾಯಭಾರಿಯಾಗಿ ದರ್ಶನ್ ಅವರು ಅನೇಕ ಯುವಜನತೆಯನ್ನು ಕೃಷಿಯತ್ತ ಪ್ರೋತ್ಸಾಹ, ಆಸಕ್ತಿ ಮೂಡಿಸಲು ಸಾಧ್ಯ ಎಂದು ಸಚಿವ ಬಿ ಸಿ ಪಾಟೀಲ್ ಹೇಳುತ್ತಾರೆ.
ಕೇಂದ್ರ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೂ ದರ್ಶನ್ ಅವರು ರಾಜ್ಯದ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.