ಸಹೋದರಿಯ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದಾಗ ಅಪಘಾತ; ಪತ್ರಕರ್ತ ಸಾವು
ತಂಗಿಯ ಮೃತದೇಹವಿದ್ದ ಆ್ಯಂಬುಲೆನ್ಸ್ ಹಿಂಬಾಲಿಸುತ್ತಿದ್ದ ಇನ್ನೋವಾ ಕಾರು ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಪತ್ರಕರ್ತ ಮೃತಪಟ್ಟಿರುವ ದಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
Published: 02nd July 2021 01:42 PM | Last Updated: 02nd July 2021 01:56 PM | A+A A-

ಮೃತ ಪತ್ರಕರ್ತ ರಾಮು ಮುದಿಗೌಡರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಕೆ
ಚಿತ್ರದುರ್ಗ: ತಂಗಿಯ ಮೃತದೇಹವಿದ್ದ ಆ್ಯಂಬುಲೆನ್ಸ್ ಹಿಂಬಾಲಿಸುತ್ತಿದ್ದ ಇನ್ನೋವಾ ಕಾರು ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಪತ್ರಕರ್ತ ಮೃತಪಟ್ಟಿರುವ ದಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆದಿವಾಲ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಸುಕಿನಲ್ಲಿ ಈ ದುರ್ಘಟನೆ ನಡೆದಿದ್ದು, ಮೃತರನ್ನು ಹಿರೇಕೆರೂರು ತಾಲ್ಲೂಕಿನ ಹಿರೇಮೊರಬ ಗ್ರಾಮದ ರಾಮು ಮುದಿಗೌಡರ (56 ವರ್ಷ) ಎಂದು ಗುರುತಿಸಲಾಗಿದೆ. ರಾಮು ಮುದಿಗೌಡರ ಅವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು.
ರಾಮು ಅವರ ಸಹೋದರಿ ರೇಣುಕಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದರು. ಆ್ಯಂಬುಲೆನ್ಸ್ ನಲ್ಲಿ ಸಹೋದರಿಯ ಮೃತದೇಹ ತೆಗೆದುಕೊಂಡು ಹಿರೇಕೇರೂರಿಗೆ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪತ್ರಕರ್ತರಾಗಿದ್ದ ರಾಮು ಅವರು ಹಿರೇಕೆರೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹಿರೇಕೆರೂರು ತಾಲೂಕಿನ @Vijaykarnataka ದಿನಪತ್ರಿಕೆಯ ವರದಿಗಾರರು ಹಾಗೂ ಆತ್ಮೀಯರಾದ ಶ್ರೀ ರಾಮು ಮುದಿಗೌಡರ ಅವರು ನಿನ್ನೆ ರಾತ್ರಿ ಹಿರಿಯೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, pic.twitter.com/Blqpuvz1V1
— Kourava B.C.Patil (@bcpatilkourava) July 2, 2021
ಶ್ರದ್ಧಾಂಜಲಿ ಸಲ್ಲಿಸಿದ ಸಚಿವ ಬಿ.ಸಿ.ಪಾಟೀಲ್
ಇದೇ ವೇಳೆ ಪತ್ರಕರ್ತ ರಾಮು ಮುದಿಗೌಡರ ಅವರ ನಿಧನಕ್ಕೆ ಹಿರೇಕೆರೂರು ಶಾಸಕ ಹಾಗೂ ಸಚಿವ ಬಿ.ಸಿ.ಪಾಟೀಲ್ ಕಂಬನಿ ಮಿಡಿದಿದ್ದು, ಶ್ರದ್ಧಾಂಜಲಿ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಹಿರೇಕೆರೂರು ತಾಲೂಕಿನ ದಿನಪತ್ರಿಕೆಯ ವರದಿಗಾರರು ಹಾಗೂ ಆತ್ಮೀಯರಾದ ಶ್ರೀ ರಾಮು ಮುದಿಗೌಡರ ಅವರು ನಿನ್ನೆ ರಾತ್ರಿ ಹಿರಿಯೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಇಂದು ಹಿರೇಕೆರೂರು ಪಟ್ಟಣದ ಸರ್ವಜ್ಞ ವೃತ್ತದಲ್ಲಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರಾಮು ಮುದಿಗೌಡರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.