ಕೋವಿಡ್-19: ಅನ್ ಲಾಕ್ 3.0ಗೆ ರಾಜ್ಯ ಸರ್ಕಾರದ ಚಿಂತನೆ; ತಜ್ಞರಿಂದ ಸೋಂಕು ಉಲ್ಬಣದ ಎಚ್ಚರಿಕೆ

ಅನ್‌ಲಾಕ್‌-3.0 ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಈ ನಡುವಲ್ಲೇ ಸೋಂಕು ಉಲ್ಬಣಗೊಳ್ಳುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅನ್‌ಲಾಕ್‌-3.0 ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಈ ನಡುವಲ್ಲೇ ಸೋಂಕು ಉಲ್ಬಣಗೊಳ್ಳುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಸೋಮವಾರದಿಂದ(ಜುಲೈ 5) ರಾಜ್ಯಾದ್ಯಂತ ಸಂಪೂರ್ಣ ಅನ್‌ಲಾಕ್‌ ಮಾಡುವ ಬಗ್ಗೆ ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ನಿರೀಕ್ಷೆಗಳಿವೆ. 

ರಾಜ್ಯ ಸರ್ಕಾರ ಈ ನಡೆ ಕುರಿತು ಮಾಹಿತಿಯಿಲ್ಲದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರು, ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡುವುದು ಸೂಕ್ತವಲ್ಲ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕು ಉಲ್ಬಣಗೊಂಡಿದ್ದು, ಈ ಸಮಯದಲ್ಲಿ ಕರ್ಫ್ಯೂ ತೆಗೆದಿದ್ದೇ ಆದರೆ, ರಾಜ್ಯದಲ್ಲಿ ಸೋಂಕು ಉಲ್ಭಣಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ. 

ಇಂದು ಸಂಜೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಯಲಿದ್ದು, ಕೊರೋನಾ ನಿರ್ಬಂಧಗಳ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥ ನಾರಾಯಣ್ ಅವರು ಹೇಳಿದ್ದಾರೆ. 

ಆದರೆ, ತಜ್ಞರ ಸಮಿತಿಯು ರಾಜ್ಯ ಸರ್ಕಾರ ಇನ್ನೆರಡು ವಾರಗಳ ಕಾದು ಪರಿಸ್ಥಿತಿ ಆಧರಿಸಿ ನಿರ್ಧಾರ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ. 

ನಿಯಮಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸುವುದಕ್ಕೂ ಮುನ್ನ ಸರ್ಕಾರ ಇನ್ನೆರಡು ವಾರಗಳ ಕಾಲ ಕಾದುನೋಡಬೇಕಿದೆ. ಕನಿಷ್ಠ ಪಕ್ಷ ನೈಟ್ ಕರ್ಫ್ಯೂವನ್ನಾದರೂ ಮುಂದುವರೆಸಬೇಕು. ಕೊರೋನಾ ಮೊದಲನೇ ಹಾಗೂ ಎರಡನೇ ಅಲೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕು ಉಲ್ಬಣಗೊಂಡ ನಾಲ್ಕು ವಾರಗಳ ಬಳಿಕ ರಾಜ್ಯದಲ್ಲಿಯೂ ಸೋಂಕು ಉಲ್ಬಣಗೊಂಡ ಬೆಳವಣಿಗೆಗಳು ಕಂಡು ಬಂದಿತ್ತು. ರಾಜ್ಯಕ್ಕೆ ಹೆಚ್ಚೆಚ್ಚು ಜನರು ಬರುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿಯೂ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. 

ಜಯದೇವ ಆಸ್ಪತ್ರೆಯ ನಿರ್ದೇಶಕ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸಿಎನ್.ಮಂಜುನಾಥ್ ಅವರು ಮಾತನಾಡಿ, ಹೆಚ್ಚೆಚ್ಚು ಜನರು ಸೇರುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಸರ್ಕಾರ ಹೆಚ್ಚು ಸಮಯದವರೆಗೆ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗದಿದ್ದರೂ, ವಾರಾಂತ್ಯದ ಲಾಕ್‌ಡೌನ್ ನ್ನು ಮುಂದುವರೆಸಬೇಕು ಎಂದು ಹೇಳಿದ್ದಾರೆ. 

ನಾವು ಆರ್ಥಿಕ ಚಟುವಟಿಕೆಗಳನ್ನು ಅತ್ಯಂತ ನಿಯಂತ್ರಿತ ರೀತಿಯಲ್ಲಿ ತೆರೆಯಬೇಕು ಮತ್ತು ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಪ್ರೋತ್ಸಾಹಿಸಬಾರದು. ನೈಟ್ ಕರ್ಫ್ಯೂ ಮುಂದುವರಿಸಬಹುದು ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಶೈಕ್ಷಣಿಕ ಸಂಶೋಧನಾ ಕೇಂದ್ರದ ಮುಖ್ಯಸ್ಥ, ಕೋವಿಡ್ -19 ಕಾರ್ಯಪಡೆಯ ತಜ್ಞ ಸಮಿತಿ ಸದಸ್ಯ ಡಾ. ವಿಶಾಲ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಜನರು ಕೊರೋನಾ ನಿಯಮಗಳನ್ನು ಮರೆಯಬಾರದು. ಜೀವನ ಮತ್ತು ಜೀವನೋಪಾಯ ಎರಡೂ ಕಡೆ ಗಮನಹರಿಸಬೇಕಿದೆ. ಜೀವನೋಪಾಯಕ್ಕೆ ಜನರು ಹೊರಗೆ ಬರಲೇಬೇಕೆಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಪ್ರತೀಯೊಬ್ಬ ನಾಗರೀಕನೂ ಕೊರೋನಾ ನಿಯಮವನ್ನು ಜವಾಬ್ದಾರಿಯುತವಾಗಿ ಪಾಲನೆ ಮಾಡಬೇಕು. ಇಲ್ಲದೇ ಹೋದಲ್ಲಿ ಮರಳಿ ಲಾಕ್ಡೌನ್ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಡಾ.ಮಂಜುನಾಥ್ ಅವರು ಎಚ್ಚರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com