ಕೋವಿಡ್ ಸಾಂಕ್ರಾಮಿಕ: ಭೌತಿಕ ತರಗತಿಗಳ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಪರ್ಯಾಯವಾಗುತ್ತಿರುವ ಟಿವಿ ಶಿಕ್ಷಣ!

ಕೋವಿಡ್ ಸಾಂಕ್ರಾಮಿಕದಿಂದಾಗಿ ಕರ್ನಾಟಕದಲ್ಲಿ ಶಾಲಾ ಚಟುವಟಿಕೆಗಳು ಬಹುತೇಕ ಸ್ಥಗಿತವಾಗಿದ್ದು, ಭೌತಿಕ ತರಗತಿಗಳ ಅನುಪಸ್ಥಿತಿಯಲ್ಲಿ ಟಿವಿ ಶಿಕ್ಷಣ ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗವಾಗಿ ಕಾಣುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದಾಗಿ ಕರ್ನಾಟಕದಲ್ಲಿ ಶಾಲಾ ಚಟುವಟಿಕೆಗಳು ಬಹುತೇಕ ಸ್ಥಗಿತವಾಗಿದ್ದು, ಭೌತಿಕ ತರಗತಿಗಳ ಅನುಪಸ್ಥಿತಿಯಲ್ಲಿ ಟಿವಿ ಶಿಕ್ಷಣ ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗವಾಗಿ ಕಾಣುತ್ತಿದೆ.

ಹೌದು.. ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಗಳ ಅಬ್ಬರದ ನಡುವೆಯೂ ಈಗಲೂ ದೂರದರ್ಶನವು ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಅತ್ಯಂತ ಜನಪ್ರಿಯ ಎಲೆಕ್ಟ್ರಾನಿಕ್ ಸಾಧನವಾಗಿ ಉಳಿದಿದ್ದು, ಆಫ್‌ಲೈನ್ ತರಗತಿ (ಭೌತಿಕ ತರಗತಿ)ಗಳ ವಿಳಂಬದ ನಡುವೆಯೇ ಬೋಧನೆಗಾಗಿ ಟಿವಿ ಉನ್ನತ ಪರ್ಯಾಯ  ಮಾಧ್ಯಮವಾಗಿದೆ.

ಈ ಕುರಿತಂತೆ ಶಿಕ್ಷಣ ಇಲಾಖೆಯಿಂದ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ 1 ರಿಂದ 10 ನೇ ತರಗತಿಯವರೆಗಿನ ಶೇ.87 ರಷ್ಟು ವಿದ್ಯಾರ್ಥಿಗಳಿಗೆ ತರಗತಿಗಳಿಗಾಗಿ ಮತ್ತು ಪಾಠ ಪ್ರವಚನಗಳಿಗಾಗಿ ಟೆಲಿವಿಷನ್ ಸೆಟ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ  ಸಮೀಕ್ಷೆ ನಡೆಸಿದ್ದು, 1 ರಿಂದ 10 ನೇ ತರಗತಿಯ 1.05 ಕೋಟಿ ವಿದ್ಯಾರ್ಥಿಗಳ ಪೈಕಿ 93.01 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ಸಮೀಕ್ಷೆ ಮೂಲಕ ಸಂಗ್ರಹಿಸಲಾಗಿದೆ. ಸಮೀಕ್ಷೆಯಲ್ಲಿ 93 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 81 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಿವಿ ಮೂಲಕ  ತರಗತಿಗಳನ್ನು ಪಡೆಯುತ್ತಿದ್ದು, ಕೇವಲ ಸುಮಾರು 58 ಲಕ್ಷ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಮತ್ತು ಗ್ಯಾಜೆಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ಆಫ್‌ಲೈನ್ ತರಗತಿಗಳ ಕೊರತೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲು ಇಲಾಖೆ ಪರ್ಯಾಯ ಮಾರ್ಗಗಳನ್ನು ರೂಪಿಸುತ್ತಿದ್ದು, ಜುಲೈ 5 ರಿಂದ ಸರ್ಕಾರಿ ಸ್ವಾಮ್ಯದ ಚಾನೆಲ್ ದೂರದರ್ಶನದಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ತರಗತಿಗಳನ್ನು ಪ್ರಸಾರ ಮಾಡುವುದಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ  ಇಲಾಖೆ ಬುಧವಾರ ಪ್ರಕಟಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಅಂದರೆ 58.59 ಲಕ್ಷ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್‌ಗಳನ್ನು ಹೊಂದಿದ್ದಾರೆಯಾದರೂ ಈ ಪೈಕಿ 37.79 ಲಕ್ಷ ವಿದ್ಯಾರ್ಥಿಗಳು ತಮಗೆ ಇಂಟರ್ನೆಟ್ ಲಭ್ಯತೆ ಇಲ್ಲ ಎಂದು ಹೇಳಿದ್ದಾರೆ. 

ಟೆಲಿ ತರಗತಿ
ಇದೇ ವೇಳೆ ಟಿವಿ ಮತ್ತು ಕೇವಲ ಸ್ಮಾರ್ಟ್ ಫೋನ್ ಇಲ್ಲದವರಿಗೆ ತರಗತಿ ನೀಡಲೂ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಟೆಲಿ ತರಗತಿಗಳನ್ನು ಆರಂಭಿಸುವ ಕುರಿತು ಚರ್ಚಿಸಲಾಗಿದೆ. ಟಿವಿ ಮತ್ತು ಸ್ಮಾರ್ಟ್ ಫೋನ್ ಗಳು ಇಲ್ಲದ ವಿದ್ಯಾರ್ಥಿಗಳಿಗೆ ಶಿಕ್ಷಕರೇ ನಿಯಮಿತ ಕರೆಗಳ ಮೂಲಕ ತರಗತಿ ನೀಡುವ ಕುರಿತು  ಚರ್ಚಿಸಲಾಗಿದೆ. 79.33 ಲಕ್ಷ ವಿದ್ಯಾರ್ಥಿಗಳು ಈ ಉದ್ದೇಶಕ್ಕಾಗಿ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com