ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಇನ್ನು ಮುಂದೆ ಶೇ.1ರಷ್ಟು ಹುದ್ದೆ ತೃತೀಯ ಲಿಂಗಿಗಳಿಗೆ ಮೀಸಲು
ಸರ್ಕಾರಿ ಉದ್ಯೋಗಗಳ ಎಲ್ಲಾ ನೇರ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಆಂತರಿಕ ಮೀಸಲಾತಿ ವಿಸ್ತರಿಸಿ ರಾಜ್ಯ ಸರ್ಕಾರ ನಿನ್ನೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
Published: 07th July 2021 07:54 AM | Last Updated: 07th July 2021 12:48 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸರ್ಕಾರಿ ಉದ್ಯೋಗಗಳ ಎಲ್ಲಾ ನೇರ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಆಂತರಿಕ ಮೀಸಲಾತಿ ವಿಸ್ತರಿಸಿ ರಾಜ್ಯ ಸರ್ಕಾರ ನಿನ್ನೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ, ಇತರ ಹಿಂದುಳಿದ ವರ್ಗಗಳು ಸೇರಿದಂತೆ ಪ್ರತಿ ವರ್ಗಗಳಲ್ಲಿ ಎಲ್ಲಾ ರೀತಿಯ ಸರ್ಕಾರದ ನೇರ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇಕಡಾ 1ರಷ್ಟು ಮೀಸಲಾತಿ ಸಿಗಲಿದೆ.
ಕರ್ನಾಟಕ ನಾಗರಿಕ ಸೇವೆ(ಸಾಮಾನ್ಯ ನೇಮಕಾತಿ)ನಿಯಮ 1977ಕ್ಕೆ ತಿದ್ದುಪಡಿ ತರಲಾಗಿದ್ದು, ಅದರಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಕಾಲಂನ್ನು ಅರ್ಜಿಗಳಲ್ಲಿ ನಮೂದಿಸಬೇಕೆಂದು ಅದರಡಿ ಇತರರು ಎಂದು ನಮೂದಿಸಿ ಮೀಸಲಾತಿ ನಿಯಮ ಜಾರಿಗೆ ತರಬೇಕೆಂದು ಸೂಚಿಸಿದೆ.
ಹೊಸ ನಿಯಮ, ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9ರಡಿಯಲ್ಲಿ ಬರುತ್ತದೆ. ಕೇಂದ್ರ ಸರ್ಕಾರದ 2019 ರ ತೃತೀಯ ಲಿಂಗಿಗಳ (ಹಕ್ಕುಗಳ ಸಂರಕ್ಷಣೆ) ಕಾಯ್ದೆಯಲ್ಲಿ ವಿವರಿಸಿದಂತೆ ಕರ್ನಾಟಕ ಸರ್ಕಾರವು ನೇರ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳೆಂದು ಯಾರು ಎಂಬುದನ್ನು ಕೂಡ ವಿವರಿಸಿದೆ.