ಕೋವಿಡ್-19: ಅತಿ ಹೆಚ್ಚು ಸೋಂಕಿತರಿರುವ 8 ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದು!

ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ದೇಶದ 8 ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದಾಗಿದ್ದು, ಈ ಬೆಳವಣಿಗೆಯು ಜನತೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ದೇಶದ 8 ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದಾಗಿದ್ದು, ಈ ಬೆಳವಣಿಗೆಯು ಜನತೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಹಲವು ರಾಜ್ಯಗಳಲ್ಲಿ ಅನ್'ಲಾಕ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಈ ಬೆಳವಣಿಗೆ ನಡುವಲ್ಲೇ ದೇಶದಲ್ಲಿ ಕೊರೋನಾ ಆರ್ಭಟ ಮತ್ತೆ ಹೆಚ್ಚಾಗತೊಡಗಿದೆ. ದೇಶದ ಅತೀ ಹೆಚ್ಚು ಕೊರೊನಾ ಸೋಂಕಿತರು ಹೊಂದಿರುವ 8 ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಅವರು, ದೇಶದಲ್ಲಿ ಪ್ರಸ್ತುತ ಪತ್ತೆಯಾಗಿರುವ ಶೇ.80ರಷ್ಟು ಸೋಂಕು ಪ್ರಕರಣಗಳು 8 ರಾಜ್ಯಗಳ 90 ಜಿಲ್ಲೆಗಳಿಂದಲೇ ವರದಿಯಾಗುತ್ತಿವೆ. ಮಹಾರಾಷ್ಟ್ರದ 15 ಜಿಲ್ಲೆಗಳು, ತಮಿಳುನಾಡಿನ 15 ಜಿಲ್ಲೆಗಳು, ಕೇರಳ 14 ಜಿಲ್ಲೆ,  ಒಡಿಶಾ 11 ಆಂಧ್ರಪ್ರದೇಶ 10 ಮತ್ತು ಕರ್ನಾಟಕದ 8 ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದ್ದಾರೆ. 

ಸೋಂಕು ಇದೀಗ ಸ್ಥಳೀಯ ರೀತಿಯಲ್ಲಿ ಹರಡುತ್ತಿದೆ. ಜನರು ಸೇಡು ತೀರಿಸುತ್ತಿರುವಂತೆ ಪ್ರಯಾಣ ಮಾಡುತ್ತಿದ್ದಾರೆ ಮನಾಲಿ, ಮುಸ್ಸೂರಿ, ಸದರ್ ಬಜಾರ್ ದೆಹಲಿ, ಶಿಮ್ಲಾ, ಲಕ್ಷ್ಮಿ ನಗರ ದೆಹಲಿ, ದಾದರ್ ಮಾರ್ಕೆಟ್ ನಿಂದ ಬರುವ ಕೆಲವು ಫೋಟೋಗಳು ಮಾಸ್ಕ್ ಇಲ್ಲದೆ ಸುತ್ತಾಡುತ್ತಿರುವುದನ್ನು ತೋರಿಸುತ್ತದೆ. ಇದು ಅಪಾಯಕಾರಿ. ಇದು ನಿರಂತರ ಹೋರಾಟ ಎಂದು ಜನರು ಅರ್ಥಮಾಡಿಕೊಳ್ಳಬೇಕು. ವೈರಸ್ ದಣಿದಿಲ್ಲ, ಅದು ಇನ್ನೂ ಇದೆ. ಸೂಕ್ತವಾದ ನಡವಳಿಕೆಯಿಂದ ಮಾತ್ರ ಕೊರೊನಾವೈರಸ್ ಅನ್ನು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.

ರಾಜ್ಯಗಳು ಅತೀ ಹೆಚ್ಚು ಸೋಂಕಿರುವ ಜಿಲ್ಲೆಗಳತ್ತ ಹೆಚ್ಚು ಗಮನಹರಿಸಬೇಕಿದೆ. ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಲಸಿಕೆಯನ್ನು ಹಾಕುವುದರ ಜೊತೆಗೆ ಜನರು ಕೊರೋನಾ ನಿಯಮಗಳನ್ನು ಪಾಲನೆ ಮಾಡುವಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ಆರ್'ಟಿ-ಪಿಸಿಆರ್ ಪರೀಕ್ಷೆಗಳನ್ನು ಗರಿಷ್ಠ ಮಟ್ಟದಲ್ಲಿ ನಡೆಸಬೇಕಿದೆ ಎಂದು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. 

ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ ಅವರು ಮಾತನಾಡಿ, ಜನರು ಕೊರೋನಾ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡದೇ ಹೋದಲ್ಲಿ ಇದೂವರೆಗೂ ತೆಗೆದುಕೊಂಡಿದ್ದ ಕಠಿಣ ಕ್ರಮಗಳೆಲ್ಲಾ ವ್ಯರ್ಥವಾಗುತ್ತದೆ. ಇದೀಗ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕೂಡ ಪತ್ತೆಯಾಗಿದ್ದು, ಇದೂ ಅತ್ಯಂತ ವೇಗವಾಗಿ ಸೋಂಕು ಹರಡುವಂತೆ ಮಾಡುತ್ತಿದೆ. ವೈರಸ್ ವಿರುದ್ಧ ಹೋರಾಟಲು ಡಬಲ್ ಮಾಸ್ಕ್, ಶುಚಿತ್ವ ಕಾಪಾಡುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದಾರೆ. 

ಈ ನಡುವೆ ರಾಜ್ಯದ ಕೊಡಗು ಹಾಗೂ ಹಾಸನದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ದಿನಕಳೆದಂತೆ ಹೆಚ್ಚುತ್ತಲೇ ಇದ್ದು, ಇದು ಆತಂಕವನ್ನು ಹೆಚ್ಚು ಮಾಡಿದೆ. ಜೂನ್.29-ಜುಲೈ5 ರವರೆಗೆ ಈ ಎರಡು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಸೇ.6.76 ಮತ್ತು ಶೇ.6.05ರಷ್ಟಿದೆ ಎಂದು ತಿಳಿದುಬಂದಿದೆ. 

ಜಯದೇವ ಆಸ್ಪತ್ರೆಯ ವೈದ್ಯ ಡಾ.ಸಿಎನ್.ಮಂಜುನಾಥ್ ಅವರು ಮಾತನಾಡಿ, ಈ ಜಿಲ್ಲೆಗಳಲ್ಲಿ ಐಸಿಯುವಿಗೆ ದಾಖಲಾಗುತ್ತಿರುವವರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಮೇಲೆ ರಾಜ್ಯ ಸರ್ಕಾರ ಹೆಚ್ಚಿನ ಗಮನಕೊಡಬೇಕಿದೆ. ವಿಳಂಬವಾಗಿ ಆಸ್ಪತ್ರೆಗೆ ಸೋಂಕಿತರು ದಾಖಲಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಬೆಳವಣಿಗೆ ಇದೇ ರೀತಿ ಮುಂದುವರೆದಿದ್ದೇ ಆದರೆ, ಈ ಜಿಲ್ಲೆಗಳ ಮೇಲೆ ಮತ್ತಷ್ಟು ಗಮನಹರಿಸಿ ಕ್ರಮಗಳ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com