ಕೆಆರ್ ಎಸ್ ಡ್ಯಾಂ ಬಿರುಕುಬಿಟ್ಟಿದ್ದರೆ ಕರೆದುಕೊಂಡು ಹೋಗಿ ತೋರಿಸಲಿ, ಮುಖ್ಯಮಂತ್ರಿಗಳ ಗಮನಕ್ಕೆ ತರಲಿ: ಸಂಸದ ಪ್ರತಾಪ್ ಸಿಂಹ 

ಕೆಆರ್ ಎಸ್ ಬಿರುಕು ಬಿಟ್ಟಿದೆಯೇ, ಮಾಧ್ಯಮದವರು ಖುದ್ದಾಗಿ ಹೋಗಿ ನೋಡಿದ್ದೀರಾ ಅಥವಾ ಬಿರುಕು ಬಿಟ್ಟಿದೆ ಎನ್ನುವವರು ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಿದ್ದಾರಾ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ
ಮೈಸೂರಿನಲ್ಲಿಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ

ಮೈಸೂರು: ಕೆಆರ್ ಎಸ್ ಬಿರುಕು ಬಿಟ್ಟಿರುವ ಬಗ್ಗೆ ಸಂಶಯ ವ್ಯಕ್ತವಾದ ಮೇಲೆ ನಾನು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಬಳಿ ಮಾಹಿತಿ ಪಡೆದುಕೊಂಡಿದ್ದೇನೆ. ಆದರೆ ನಾನು ಮಾಧ್ಯಮದವರನ್ನು ಕೇಳುತ್ತಿದ್ದೇನೆ, ಕೆಆರ್ ಎಸ್ ಬಿರುಕು ಬಿಟ್ಟಿದೆಯೇ, ಮಾಧ್ಯಮದವರು ಖುದ್ದಾಗಿ ಹೋಗಿ ನೋಡಿದ್ದೀರಾ ಅಥವಾ ಬಿರುಕು ಬಿಟ್ಟಿದೆ ಎನ್ನುವವರು ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಿದ್ದಾರಾ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಕೆಆರ್ ಎಸ್ ಜಲಾಶಯ ಬಿರುಕುಬಿಟ್ಟಿದೆ ಎಂದು ಒಂದಷ್ಟು ಮಂದಿ, ಬಿರುಕು ಬಿಟ್ಟಿಲ್ಲ ಎಂದು ಮತ್ತೊಂದಷ್ಟು ಮಂದಿ ಹೇಳುವುದು ಸರಿಯಲ್ಲ, ಸತ್ಯಶೋಧನಾ ಸಮಿತಿಯಿಂದ ತನಿಖೆಯಾಗಲಿ. ಮಾಧ್ಯಮಗಳ ಮುಂದೆ ಹೇಳಿಕೆಗಳ ಮೇಲಾಟ ನಡೆಯುತ್ತಿದೆಯೇ ಹೊರತು ಸತ್ಯಸಂಗತಿ ತಿಳಿದುಕೊಳ್ಳುವ ಪ್ರಯತ್ನಗಳಾಗುತ್ತಿಲ್ಲ ಎಂದು ಮೈಸೂರಿನಲ್ಲಿಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ಬಂದಿರುವ ಮಾಹಿತಿ ಪ್ರಕಾರ ಬಿರುಕು ಬಿಟ್ಟಿಲ್ಲ ಎಂದು ಬಂದಿದೆ, ನೀವು ಮಾಧ್ಯಮದವರು ಖುದ್ದಾಗಿ ಹೋಗಿ ನೋಡಿಕೊಂಡು ಬನ್ನಿ, ಬಿಟ್ಟಿದೆ ಎಂದಾದರೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಮಾಡಿ ನಂತರ ಸಮಿತಿ ಮಾಡಿ ಸರಿಪಡಿಸಲು ಕ್ರಮ ತೆಗೆದುಕೊಳ್ಳೋಣ ಎಂದರು.

ಕೆರೆ-ಕಟ್ಟೆ, ಡ್ಯಾಂಗಳಲ್ಲಿ ನೀರಿನ ಒಸರು ಹೋಗುವುದು ಸಾಮಾನ್ಯವಾಗಿರುತ್ತದೆ, ಅದನ್ನು ನೋಡಿಕೊಂಡು ಬಿರುಕು ಬಿಟ್ಟಿದೆ ಎಂದರೆ ತಪ್ಪು ಅಭಿಪ್ರಾಯ ಆಗಿರುತ್ತದೆ. ನಿಜವಾಗಿಯೂ ಬಿರುಕು ಬಿಟ್ಟಿದ್ದರೆ ಅದು ಗಂಭೀರ ವಿಷಯವಾಗುತ್ತದೆ, ಕೂಡಲೇ ಅದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com