ವಿದೇಶಿ ಕಂಪನಿಗಳಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ: ಬೆಂಗಳೂರಿನಲ್ಲಿ ಓರ್ವನ ಬಂಧನ

ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬಸವನಗುಡಿಯ ಕೃಷ್ಟ್ ಪಾರ್ಕ್ ಅಪಾರ್ಟ್‍ಮೆಂಟ್ ನಿವಾಸಿ ಶ್ರೀನಿವಾಸ ರಾಘವನ್ ಅಯ್ಯಂಗಾರ್ (55) ಬಂಧಿತ ಆರೋಪಿ. ಈತ ತಾನು ಮೈಕ್ರೋಸಾಫ್ಟ್ ಕಂಪೆನಿಯ ಉದ್ಯೋಗಿ ಎಂದು ನಕಲಿ ಐಡಿ ಕಾರ್ಡ್ ಮತ್ತು ವಿಸಿಟಿಂಗ್ ಕಾರ್ಡ್‍ಗಳನ್ನು ಮಾಡಿಕೊಂಡು ವಿಆರ್‍ಆರ್ ವೆಂಚರ್ಸ್ ಎಂಬ ಕಂಪೆನಿಯನ್ನು ಪ್ರಾರಂಭಿಸಿದ್ದರು.

ತನ್ನ ಕಂಪೆನಿಯಲ್ಲಿ ರಾಮಕೃಷ್ಣ , ಸಂತೋಷ್‍ಕುಮಾರ್ ಮತ್ತು ರಾಜೀವ್ ರಾವ್ ಎಂಬುವರನ್ನು ಡೈರೆಕ್ಟರ್ ಎಂದು ನೇಮಿಸಿಕೊಂಡು ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಪ್ರತಿಷ್ಟಿತ ಕಂಪೆನಿಗಳಲ್ಲಿ ಹಾಗೂ ದೇಶ ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಹಣ ಪಡೆದು ವಂಚಿಸುತ್ತಿದ್ದರು.

ನಕಲಿ ಇ ಮೇಲ್ ಐಡಿಗಳನ್ನು ತಯಾರಿಸಿಕೊಂಡು ಅಭ್ಯರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿರುವಂತೆ ಇ ಮೇಲ್ ಕಳುಹಿಸಿ ಅವರಿಂದ ವೀಸಾ, ಸ್ಟಾಂಪಿಂಗ್, ಡಾಕ್ಯುಮೆಂಟ್ ವೆರಿಫಿಕೇಶನ್ ಫೀಸ್ ಎಂದು ಹಣ ಪಡೆದು ವಂಚಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಕೆನಡಾ ಮೂಲದ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 3 ಲಕ್ಷ ಹಣ ಪಡೆದಿದ್ದಾರೆ ಎಂದು ಅರುಣಾ ಬಿವಿ ಎಂಬುವರು ದೂರು ದಾಖಲಿಸಿದ್ದಾರೆ, ಇದಲ್ಲದೇ 4 ಮಂದಿಯು 20 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಿದ್ದಾರೆ ಎಂದು ಹೇಳಲಾಗಿದೆ,  ಸುಮಾರು 40 ಮಂದಿಯಿಂದ ಹಣ ಪಡೆದು ಮೋಸ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದೇ ವೇಳೆ ಉಳಿದ ನಿರ್ದೇಶಕರುಗಳನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com