ಆನ್‌ಲೈನ್ ಜೂಜು: ಸಚಿವ ಸಂಪುಟ ಅನುಮೋದನೆ ಬಳಿಕ ನಿರ್ಧಾರ; ಹೈಕೋರ್ಟ್'ಗೆ ಸರ್ಕಾರ ಮಾಹಿತಿ

ಆನ್‌ಲೈನ್ ಜೂಜಿಗೆ ಸಂಬಂಧಿಸಿದಂತೆ ಮಸೂದೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ಇರಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆನ್‌ಲೈನ್ ಜೂಜಿಗೆ ಸಂಬಂಧಿಸಿದಂತೆ ಮಸೂದೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ಇರಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅಫಿಡವಿಟ್ ಸಲ್ಲಿಸಿದರು. ಸಂಪುಟದ ಮುಂದೆ ಮಸೂದೆ ಮಂಡಿಸಲು ಎಲ್ಲಾ ಸಿದ್ಧತೆಗಳನ್ನು ಗೃಹ ಇಲಾಖೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ಮತ್ತು ಶಾಸನಸಭೆಯ ಅನುಮೋದನೆ ಪಡೆದ ಬಳಿಕ ಸರ್ಕಾರದ ನಿಲುವನ್ನು ನ್ಯಾಯಾಯಲಯದ ಮುಂದೆ ಮಂಡಿಸಲಾಗುವುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. 

ಆನ್‍ಲೈನ್ ಜೂಜು ರದ್ದು ಕೋರಿ ದಾವಣಗೆರೆ ನಿವಾಸಿ ಡಿ.ಆರ್.ಶಾರದಾ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋಟ್ ನ್ಯಾಯಪೀಠದಲ್ಲಿ ಗುರುವಾರ ನಡೆಯಿತು.

ಈ ವೇಳೆ ರಾಜ್ಯದಲ್ಲಿ ಆನ್‍ಲೈನ್ ಜೂಜು ರದ್ದು ಕುರಿತು ಸ್ಪಷ್ಟ ನಿಲುವು ತಿಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರಕಾರದ ಧೋರಣೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ಸ್ಪಷ್ಟ ನಿಲುವು ತಿಳಿಸುವಂತೆ ಸೂಚನೆ ನೀಡಿತು. 

ಈ ವೇಳೆ ಸರ್ಕಾರದ ಪರ ವಾದಿಸಿದ ವಕೀಲರು, ಆನ್‍ಲೈನ್ ಜೂಜು ನಿಷೇಧಿಸುವ ಸಂಬಂಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಆನ್‍ಲೈನ್ ಜೂಜಿಗೆ ಸಂಬಂಧಿದಂತೆ ಕಾಯ್ದೆ ರೂಪಿಸಲಾಗುತ್ತಿದೆ. ಶೀಘ್ರದಲ್ಲೇ ಕರಡು ಪ್ರತಿಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚಿಸಲಾಗುವುದು. ಪ್ರಸ್ತುತ ಪೊಲೀಸ್ ಕಾಯ್ದೆ ಬಿಟ್ಟರೆ ಆನ್‍ಲೈನ್ ಜೂಜು ನಿಯಂತ್ರಣಕ್ಕೆ ಬೇರೆ ಕಾನೂನುಗಳಿಲ್ಲ. ಹೀಗಾಗಿ ಕರಡು ಬಿಲ್ ರಚಿಸಿ ಕ್ಯಾಬಿನೆಟ್ ಮುಂದಿಟ್ಟು ಚರ್ಚಿಸಲಾಗುವುದು. ಹೀಗಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ವಕೀಲರ ವಾದ ಆಲಿಸಿದ ಪೀಠ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಕಳೆದ ಫೆಬ್ರವರಿ 1 ರಿಂದಲೂ ಇದೇ ಹೇಳಿಕೆ ನೀಡುತ್ತಿದ್ದೀರಿ. ಆದರೆ ಆನ್‍ಲೈನ್ ಜೂಜು ನಿಯಂತ್ರಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹಲವು ಬಾರಿ ನಿರ್ದೇಶನ ನೀಡಿದ್ದರೂ ಸರಕಾರ ತನ್ನ ನಿಲುವು ತಿಳಿಸಿಲ್ಲ. ಅಂತಿಮವಾಗಿ 2 ವಾರ ಕಾಲಾವಕಾಶ ನೀಡುತ್ತೇವೆ. ಈ ಕಾಲಮಿತಿಯಲ್ಲಿ ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಂಡು ತಿಳಿಸಿ ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com