ಕೃಷಿ ವಲಯವೇ ರಾಜ್ಯದ ಮೊದಲ ಆದ್ಯತೆ; ಕೇಂದ್ರದ ಕೃಷಿ ಸಚಿವರಾಗಿರುವ ಶೋಭಾ ರೈತಪರ ಧ್ವನಿಯಾಗಲಿದ್ದಾರೆ: ಸಿಎಂ ಯಡಿಯೂರಪ್ಪ
ಕೃಷಿ ವಲಯ ರಾಜ್ಯದ ಮೊದಲ ಆದ್ಯತೆಯಾಗಿದ್ದು, ಶೋಭಾ ಕರಂದ್ಲಾಜೆ ಅವರು ಕೇಂದ್ರದ ಕೃಷಿ ಸಚಿವರಾಗಿದ್ದು ರೈತಪರ ಧ್ವನಿಯಾಗಲಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.
Published: 10th July 2021 01:56 PM | Last Updated: 10th July 2021 01:58 PM | A+A A-

ಕಲಬುರ್ಗಿಯಲ್ಲಿ 26.30 ಕೋಟಿ ರೂ. ವೆಚ್ಚದ ನೂತನ ಮಾದರಿಯ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಯಡಿಯೂರಪ್ಪ
ಕಲಬುರಗಿ: ಕೃಷಿ ವಲಯ ರಾಜ್ಯದ ಮೊದಲ ಆದ್ಯತೆಯಾಗಿದ್ದು, ಶೋಭಾ ಕರಂದ್ಲಾಜೆ ಅವರು ಕೇಂದ್ರದ ಕೃಷಿ ಸಚಿವರಾಗಿದ್ದು ರೈತಪರ ಧ್ವನಿಯಾಗಲಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.
ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ರೂ. 26 ಕೋಟಿ ವೆಚ್ಚದ ಕಣ್ಣಿ ಮಾರ್ಕೆಟ್ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ವಲಯ ರಾಜ್ಯದ ಮೊದಲ ಆದ್ಯತೆಯಾಗಿದೆ. ಕೇಂದ್ರ ಸರ್ಕಾರ ಕೂಡ ಕೃಷಿಗೆ ಪ್ರಮುಖ ಆದ್ಯತೆ ನೀಡಿದೆ. ಪ್ರಧಾನಿ ಮೋದಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಕಲ್ಪ ಮಾಡಿದ್ದಾರೆ.
ಅದಕ್ಕೆ ಪೂರಕವಾಗಿ ದೇಶದಾದ್ಯಂತ ಕಡಿಮೆ ಅವಧಿಯಲ್ಲಿ ಸಂಚರಿಸುವ ಕಿಸಾನ್ ಎಕ್ಸ್ಪ್ರೆಸ್ ರೈಲನ್ನು ಆರಂಭಿಸಿದ್ದಾರೆ. ರಾಜ್ಯ ಸರ್ಕಾರವೂ ಹೂ ಬೆಳೆಯುವ ರೈತರ ನೆರವಿಗೆ ಬಂದಿದ್ದು, ಹೂ ಬೆಳೆದು ನಷ್ಟ ಮಾಡಿಕೊಂಡಿರುವ ರೈತರಿಗೆ ತಲಾ ರೂ. 10 ಸಾವಿರದಂತೆ 69 ಸಾವಿರ ರೈತರಿಗೆ ಪ್ರಯೋಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ರೈತರಿಗಾಗಿ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಈ ವಿಚಾರವನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತರುತ್ತೇನೆಂದಿದ್ದಾರೆ.
ಶೋಭಾ ಕರಂದ್ಲಾಜೆಯವರು ಜನನಾಯಕಿಯಾಗಿದ್ದು, ಅವರು ಹೋದಲ್ಲೆಲ್ಲಾ ಅವರ ಮಾತುಗಳನ್ನು ಕೇಳಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರುತಿದ್ದರು. ಇದೀಗ ಶೋಭಾ ಕೇಂದ್ರ ಸಚಿವೆಯೂ ಆಗಿರುವುದರಿಂದ ರಾಜ್ಯದಾದ್ಯಂತ ಸಂಚರಿಸಿ ರೈತರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಹೇಳಿದ್ದಾರೆ.