
ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)
ಕಲಬುರಗಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯ ಯಾವುದೇ ಚಿಂತನೆಗಳೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯ ಯಾವುದೇ ಚಿಂತನೆಗಳೂ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸಂಪುಟದಲ್ಲಿ ರಾಜ್ಯದ ನಾಲ್ವರು ನಾಯಕರಿಗೆ ಸ್ಥಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಆರಂಭವಾಗುವ ಸಾಧ್ಯತೆಗಳಿದ್ದು, ಮೂರನೇ ಅಲೆ ತಡೆಯನ್ನು ಪರಿಣಾಮಕಾರಿಯಾಗಿ ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
ಬಳಿಕ ಕೆಆರ್'ಎಸ್ ಅಣೆಕಟ್ಟು ಬಿರುಕು ವಿಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ನಡುವೆ ಮುಂದುವರೆದಿರುವ ವಾಕ್ಸಮರ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆ.