ತುಮಕೂರು ದೇವಾಲಯದ ಬಳಿ ಮಹಿಳೆಯ ಶವ ಪತ್ತೆ: ನಿಧಿಗಾಗಿ ಬಲಿ ಶಂಕೆ, ತನಿಖೆ ಚುರುಕುಗೊಳಿಸಿದ ಪೊಲೀಸರು

ತುಮಕೂರಿನ ಎಂ.ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ನಿಧಿಗಾಗಿ ಬಲಿ ಕೊಟ್ಟಿರಬಹುದು ಎಂಬ ಶಂಕೆಗಳು ವ್ಯಕ್ತವಾಗತೊಡಗಿವೆ. 
ದೇವಾಲಯದ ಸ್ಥಳದಲ್ಲಿ ಪರಿಶೀಲನೆನಡೆಸುತ್ತಿರುವ ಅಧಿಕಾರಿಗಳು
ದೇವಾಲಯದ ಸ್ಥಳದಲ್ಲಿ ಪರಿಶೀಲನೆನಡೆಸುತ್ತಿರುವ ಅಧಿಕಾರಿಗಳು

ತುಮಕೂರು: ತುಮಕೂರಿನ ಎಂ.ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ನಿಧಿಗಾಗಿ ಬಲಿ ಕೊಟ್ಟಿರಬಹುದು ಎಂಬ ಶಂಕೆಗಳು ವ್ಯಕ್ತವಾಗತೊಡಗಿವೆ. 

ದೇವಾಲಯದ ಒಳಭಾಗದಲ್ಲಿರುವ ಆಂಜನೇಯ ವಿಗ್ರಹದ ಮುಂಭಾಗದಲ್ಲಿ ಭೂಮಿಯನ್ನು ಅಗೆದಿರುವುದು, ಶವದ ಸಮೀಪ ಅರಿಶಿನ, ಕುಂಕುಮ ಚೆಲ್ಲಾಡಿರುವುದು, ಪೂಜೆ ಸಲ್ಲಿಸಿರುವ ದೃಶ್ಯಗಳು ಕಂಡು ಬಂದಿವೆ. ಹೀಗಾಗಿ ನಿಧಿಗಾಗಿ ಬಲಿ ಕೊಟ್ಟಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ. 

ಕುರಿಗಾಹಿಗಳು ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ದುರ್ವಾಸನೆ ಬಂದಿದ್ದು, ದೇವಾಲಯದ ಅಕ್ಕಪಕ್ಕ ನೋಡಿದಾಗ ಮಹಿಳೆಯ ಕೂದಲು ಕಂಡು ಬಂದಿದೆ. ನಂತರ ಮೃತದೇಹ ಸಂಪೂರ್ಣ ಗುರುತು ಸಿಗದಂತೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಈ ಕುರಿತು ಕುರಿಗಾಹಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. 

ಗಾಬರಿಗೊಂಡ ಗ್ರಾಮಸ್ಥರು ಸ್ಥಳಕ್ಕೆ ಬಂದು ಖಚಿತಪಡಿಸಿಕೊಂಡ ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಕೊಲೆಯೊ ಅಥವಾ ಆತ್ಮಹತ್ಯೆಯೊ ಎಂಬುದು ತಿಳಿಯಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆ ಮತ್ತು ನೆರೆಯ ಗ್ರಾಮಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಆಧಾರದ ಮೇಲೆ ಮಹಿಳೆಯ ಗುರುತು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗುತ್ತಿದ್ದಂತೆಯೇ ಪ್ರಕರಣ ಕೊಲೆಯೋ ಅಥವಾ ಬಲಿದಾನ ಕುರಿತು ಸತ್ಯಾಸತ್ಯತೆ ತಿಳಿಯಲು ಸಹಾಯಕವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. 

ಎಂ.ಗೊಲ್ಲಹಳ್ಳಿ ಬೆಟ್ಟದ ಮೇಲಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಆಗಾಗೆ ನಿಧಿಗಾಗಿ ಕಿಡಿಗೇಡಿಗಳು ಭೂಮಿಯನ್ನು ಅಗೆದು ದೇಗುಲದ ಆವರಣವನ್ನು ಹಾಳು ಮಾಡುತ್ತಿರುತ್ತಾರೆ. ಈಗಲೂ ಅದೇ ರೀತಿ ಆಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com