ಅಕ್ರಮ ಗಣಿಗಾರಿಕೆ, ಸುಮಲತಾಗೆ ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಣ ಮುಸಕಿನ ಗುದ್ದಾಟಕ್ಕೆ ಕಾರಣವಾಗಿರುವ ಮಂಡ್ಯ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಗೆ ಬಗ್ಗೆ ನನಗೇನು ತಿಳಿದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Published: 11th July 2021 01:46 PM | Last Updated: 11th July 2021 01:50 PM | A+A A-

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಣ ಮುಸಕಿನ ಗುದ್ದಾಟಕ್ಕೆ ಕಾರಣವಾಗಿರುವ ಮಂಡ್ಯ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಗೆ ಬಗ್ಗೆ ನನಗೇನು ತಿಳಿದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸುಮಲತಾ ಅವರಿಗೆ ಪರೋಕ್ಷಾ ಟಾಂಗ್ ಕೊಟ್ಟರು. ನಾನು ಸಹ ಕೆಲವು ದಿನ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ ಎಂದರು.
ಕೆಆರ್ ಎಸ್ ಜಲಾಶಯದಲ್ಲಿ ಬಿರುಕು ಮೂಡಿದೆ ಎಂಬ ಹೇಳಿಕೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಲಾಶಯದ ತಳ ಭಾಗದಲ್ಲಿ ವಾಸಿಸುತ್ತಿರುವ ನಮ್ಮ ಕುಟುಂಬದ ಸದಸ್ಯರು ಕೂಡಾ ಭೀತಿಗೊಂಡಿದ್ದಾರೆ. ಚೀಪ್ ಪಬ್ಲಿಸಿಟಿಗಾಗಿ ಇಂತಹ ಹೇಳಿಕೆ ನೀಡಬಾರದು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಯೋಚಿಸಿ ಹೇಳಿಕೆ ನೀಡಬೇಕು ಎಂದು ಹೇಳುವ ಮೂಲಕ ಸುಮಲತಾ ಅವರಿಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.
ಜಲಾಶಯದಲ್ಲಿ ಬಿರುಕು ಮೂಡಿದ್ದರೆ ಸರ್ಕಾರವಿದೆ, ನೂರಾರು ಇಂಜಿನಿಯರ್ ಗಳಿದ್ದಾರೆ. ಅವರು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಆದರೆ, ಸುಮಲತಾ ಅವರು ನೀಡಿರುವ ಹೇಳಿಕೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.