ಕೋವಿಡ್-19: ಇದೀಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ ಮಾಸ್ಕ್ ವಿಲೇವಾರಿ!

ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಇಲ್ಲಿಯವರೆಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದ್ದ ಅಧಿಕಾರಿಗಳಿಗೆ ಇದೀಗ ಬಳಸಿದ ಮಾಸ್ಕ್ ಗಳ ವಿಲೇವಾರಿ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಇಲ್ಲಿಯವರೆಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದ್ದ ಅಧಿಕಾರಿಗಳಿಗೆ ಇದೀಗ ಬಳಸಿದ ಮಾಸ್ಕ್ ಗಳ ವಿಲೇವಾರಿ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರಾಜ್ಯ ಸರ್ಕಾರ ಮಾಸ್ಕ್ ಧಾರಣೆ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ಇದೀಗ ಪ್ರತಿಯೊಬ್ಬರೂ ಮಾಸ್ಕ್ ಧರಿಸುತ್ತಿದ್ದು, ಬಳಕೆಯಾದ ಮಾಸ್ಕ್ ಗಳನ್ನು ಎಲ್ಲೆಲ್ಲಂದರಲ್ಲಿ ಎಸೆಯುತ್ತಿದ್ದಾರೆ. ಈ ಬೆಳವಣಿಗೆ ಇದೀಗ ಅಧಿಕಾರಿಗಳಿಗೆ ಸಂಕಷ್ಟವನ್ನು ಎದುರು ಮಾಡಿದೆ. 

ಸಾರ್ವಜನಿಕರು ಬಳಸಿದ ಮಾಸ್ಕ್ ಗಳನ್ನು ಕಸದ ಬುಟ್ಟಿ ಒಳಗೆ ಪೇಪರ್ ಕಟ್ಟಿ ಬಿಸಾಡಬೇಕು. ಆದರೆ, ಸಾಕಷ್ಟು ಜನರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಇವುಗಳ ವಿಲೇವಾರಿ ಕಷ್ಟವಾಗಿದೆ.

ಪ್ರಸ್ತುತ ತಲೆದೋರಿರುವ ಈ ಸಮಸ್ಯೆಯನ್ನು ನಿವಾರಿಸಲು ಇದೀಗ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಂಗ್ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೈಜೋಡಿಸಿದೆ.

ಇದರಂತೆ ಗಾರ್ಮೆಂಟ್ ಫ್ಯಾಕ್ಟರಿ ಸಿಬ್ಬಂದಿಗೆ ಮಾಸ್ಕ್ ಧರಿಸುವಿಕೆ ಮತ್ತು ವಿಲೇವಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕೇಳಿಕೊಂಡಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಶ್ರೀನಿವಾಸುಲು ಅವರು ಮಾತನಾಡಿ, ಮಾಸ್ಕ್ ಕತ್ತರಿಸಿ 72 ಗಂಟೆಗಳ ಕಾಲ ಹಾಗೆಯೇ ಇಡಬೇಕು. ಬಳಿಕ ಅದನ್ನು ಡಸ್ಟ್‌ಬಿನ್‌ಗೆ ಹಾಕಿ, ಬಟ್ಟೆ ಮಾಸ್ಕ್ ಆಗಿದ್ದರೆ, ಕರವಸ್ತ್ರದ ರೀತಿಯಲ್ಲಿ ಡಸ್ಟ್‌ಬಿನ್‌ಗೆ ಹಾಕಬಹುದಾಗಿದೆ. ಒಂದು ವೇಳೆ ಸೋಂಕಿತರ ವ್ಯಕ್ತಿ ಬಳಕೆ ಮಾಡಿದ ಮಾಸ್ಕ್ ಆಗಿದ್ದರೆ, ಅದನ್ನು ಜೈವಿಕ-ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಬೇಕು. ಈ ಮಾಸ್ಕ್ ಗಳನ್ನು ವೈಜ್ಞಾನಿಕವಾಗಿ ಇತರ ವೈದ್ಯಕೀಯ ತ್ಯಾಜ್ಯಗಳೊಂದಿಗೆ ವಿಲೇವಾರಿ ಮಾಡಬೇಕು ಎಂದು ತಿಳಿಸಿದ್ದಾರೆ. 

ಬಳಕೆಯಾದ ಮಾಸ್ಕ್ ಗಳ ವಿಲೇವಾರಿಯಿಂದ ಎರಡೂ ಸಂಸ್ಥೆಗಳಿಗೂ ಭಾರಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಇದು ಆರೋಗ್ಯದ ಮೇಲೆ ಬಹುದೊಡ್ಡ ಅಪಾಯವನ್ನುಂಟು ಮಾಡಬಹುದು. ಈ ಸಮಸ್ಯೆ ಎದುರಿಸಲು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಬಹುಮುಖ್ಯವಾಗಿ ಹೋಂ ಐಸೋಲೇಷನ್ ನಲ್ಲಿರುವ ಪ್ರಕರಣಗಳತ್ತ ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com