ರಾಜ್ಯದಲ್ಲಿ ಮತ್ತೆ ಮುಂಗಾರು ಬಿರುಸು: ಅನೇಕ ಕಡೆ ಭಾರೀ ಮಳೆ

ಒಂದು ವಾರದ ಬಿಡುವಿನ ನಂತರ ರಾಜ್ಯದಲ್ಲಿ ನೈರುತ್ಯ ಮುಂಗಾರು ತೀವ್ರಗೊಂಡಿದ್ದು, ಅನೇಕ ಕಡೆ ಸಾಧಾರಣದಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರೀ ಮಳೆಯ ಚಿತ್ರ
ಭಾರೀ ಮಳೆಯ ಚಿತ್ರ

ಬೆಂಗಳೂರು: ಒಂದು ವಾರದ ಬಿಡುವಿನ ನಂತರ ರಾಜ್ಯದಲ್ಲಿ ನೈರುತ್ಯ ಮುಂಗಾರು ತೀವ್ರಗೊಂಡಿದ್ದು, ಅನೇಕ ಕಡೆ ಸಾಧಾರಣದಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಗಾರು ತೀವ್ರಗೊಂಡಂತೆ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರದ ಭಾಗಗಳಲ್ಲಿ ವ್ಯಾಪಕ, ಸಾಧಾರಣದಿಂದ ಭಾರೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಲ್ಲಿ ಮಳೆ ಮುಂದುವರೆದಿದೆ. ಮಳೆಯಿಂದ ಮಂಗಳೂರಿನ ಕದ್ರಿ ಶಿವಭಾಗ್‌ನಲ್ಲಿ ಒಂದು ದೊಡ್ಡ ಮರವೊಂದು ಬೇರು ಸಮೇತ ನೆಲಕ್ಕುರುಳಿದೆ. ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದ್ದಾರೆ.

ಮಳೆಯಿಂದ  ಉಲ್ಲಾಳ, ಸೋಮೇಶ್ವರ ಮತ್ತು ಜಿಲ್ಲೆಯ ಇತರ ಪ್ರದೇಶಗಳಲ್ಲಿ ಸಮುದ್ರದಲ್ಲಿ ಪ್ರತಿಕೂಲ ಹವಾಮಾನವಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ರಭಸದ ಗಾಳಿ ಮತ್ತು ಭಾರೀ ಅಲೆಗಳ ಹಿನ್ನೆಲೆಯಲ್ಲಿ ಕಡಲತೀರಗಳಿಗೆ ಭೇಟಿ ನೀಡುವವರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣವಿರಲಿದ್ದು, ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಏಪ್ರಿಲ್‍ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 61 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, 318 ಮನೆಗಳು ಭಾಗಶಃ ಹಾನಿಗೊಂಡಿವೆ.

ಕಲ್ಯಾಣ ಕರ್ನಾಟಕದ ಅನೇಕ ಭಾಗಗಳು ಹಾಗೂ ಮುಂಬೈ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಭಾನುವಾರದಿಂದಲೂ ಮಳೆ ಸುರಿಯುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಬೀದರ್ ಜಿಲ್ಲೆಯಲ್ಲಿ ಅಪಾರ ಬೆಳೆ ನಷ್ಟವಾಗಿದ್ದು, ಮತ್ತು ರಸ್ತೆ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಭಾಲ್ಕಿ ತಾಲ್ಲೂಕಿನ ಖುದವಂದಪುರದಲ್ಲಿ ಭಾನುವಾರ ತಡರಾತ್ರಿ ಮಹಿಳೆ ಮತ್ತು ಆಕೆಯ ಪುತ್ರಿ ಸಿಡಿಲಿನಿಂದ ಮೃತಪಟ್ಟಿದ್ದಾರೆ.

ಹೊಸಪೇಟೆ ಪಟ್ಟಣ, ಹಂಪಿ ಮತ್ತು ವಿಜಯನಗರ ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಸಹ ಭಾರಿ ಮಳೆಯಾಗಿದೆ. ಜುಲೈ 16 ರವರೆಗೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುವ ಸಾಧ್ಯತೆಯಿದೆ. ಮಳೆಗಾಲ ವೇಗ ಪಡೆದುಕೊಳ್ಳುವುದರೊಂದಿಗೆ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜುಲೈ 16 ರವರೆಗೆ ಮೇಲೆ ತಿಳಿಸಲಾದ ಏಳು ಜಿಲ್ಲೆಗಳಲ್ಲಿ ಕಿತ್ತಳೆ (ಆರೇಂಜ್‍) ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ, ಉತ್ತರ ಒಳನಾಡಿನ ಹೆಚ್ಚಿನ ಭಾಗಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಮತ್ತು ಜುಲೈ 16 ರವರೆಗೆ ಈ ಜಿಲ್ಲೆಗಳಿಗೆ ಹಳದಿ(ಯೆಲ್ಲೋ) ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com