ಮಾದರಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಹೊಂದಿದ ಮೊದಲ ರಾಜ್ಯ ಕರ್ನಾಟಕ: ಸಚಿವ ಸುರೇಶ್ ಕುಮಾರ್

ದೇಶದಲ್ಲಿ ಮಾದರಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಹೊಂದಿದ ಮೊದಲ ರಾಜ್ಯ ಕರ್ನಾಟಕ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಎಸ್ ಸುರೇಶ್ ಕುಮಾರ್
ಎಸ್ ಸುರೇಶ್ ಕುಮಾರ್

ಬೆಂಗಳೂರು: ದೇಶದಲ್ಲಿ ಮಾದರಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಹೊಂದಿದ ಮೊದಲ ರಾಜ್ಯ ಕರ್ನಾಟಕ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

ಮಂಗಳವಾರ ನಗರದ ತಲಘಟ್ಟಪುರ ಗ್ರಂಥಾಲಯದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದಿನ ಅವಶ್ಯಕತೆಗಳಿಗನುಗುಣವಾಗಿ ಡಿಜಿಟಲ್ ಗ್ರಂಥಾಲಯಗಳನ್ನು ರಾಜ್ಯಾದ್ಯಂತ ಸ್ಥಾಪಿಸಲು ಕ್ರಮ ವಹಿಸಲಾಗಿದೆ ಎಂದರು.

ಒಂದು ವರ್ಷದ ಅವಧಿಯಲ್ಲಿ ರಾಜ್ಯದೆಲ್ಲೆಡೆ 372 ಡಿಜಿಟಲ್ ಗ್ರಂಥಾಲಯಗಳು ಕಾರ್ಯಾರಂಭ ಮಾಡಲಾಗಿದೆ. ಕೋವಿಡ್ ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಉಪಕ್ರಮವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್ ಗ್ರಂಥಾಲಯ ಮೊಬೈಲ್ ಆಪ್ ಅನ್ನು ಲೋಕಾರ್ಪಣೆಗೊಳಿಸಿದೆ. ಹದಿನಾರು ಲಕ್ಷಕ್ಕೂ ಮೀರಿದ ಪುಸ್ತಕಗಳು ಮತ್ತು ಇ-ವಿಡಿಯೋ ಕಂಟೆಂಟ್ ಗಳು ಈ ಆಪ್‌ನಲ್ಲಿ ಲಭ್ಯವಿವೆ. ಇಲ್ಲಿಯವರೆಗೆ 83 ಲಕ್ಷ ಜನರು ಇದರ ಸದಸ್ಯತ್ವ ಪಡೆದಿದ್ದಾರೆ ಎಂದು ಅವರು ಹೇಳಿದರು.

ಪುಸ್ತಕ ಸಂಸ್ಕೃತಿ ಬೆಳೆಸಲು ರಾಜ್ಯಾದ್ಯಂತ 6856 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇದು ದೇಶದಲ್ಲಿಯೇ ಮಾದರಿ ಗ್ರಂಥಾಲಯ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಗ್ರಂಥಾಲಯಗಳಲ್ಲಿ ಅವಶ್ಯಕ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಈ ನಿವೇಶನದಲ್ಲಿ 99 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯರಿಗೆ ಅನುಕೂಲವಾಗುವಂತೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಕಟ್ಟಡವು 3 ಅಂತಸ್ತಿನಿಂದ ಕೂಡಿದ್ದು, ಅದರಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಹಿರಿಯ ನಾಗರೀಕರಿಗೆ ಅನುಕೂಲವಾಗುವಂತೆ ವಿವಿಧ ವಿಭಾಗಗಳನ್ನು ಸೃಜಿಸಲಾಗುವುದು. ಗ್ರಂಥಾಲಯದಲ್ಲಿ ವಿಶೇಷ ವಿಭಾಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಪ್ರತ್ಯೇಕ ವಿಭಾಗವಿರಲಿದೆ. ಹಾಗೆಯೇ ಡಿಜಿಟಲ್ ಲೈಬ್ರರಿ ಸೌಲಭ್ಯವೂ ಈ ಗ್ರಂಥಾಲಯದಲ್ಲಿ ದೊರೆಯಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಈ ಕಟ್ಟಡವನ್ನು ಆರೇಳು ತಿಂಗಳಿನಲ್ಲಿ ನಿರ್ಮಾಣ ಮಾಡಿ ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದ ಸಚಿವರು, ಈ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು ಇಲಾಖೆಯ ನಿರ್ದೇಶಕರಿಗೆ ಸಚಿವರು ಸೂಚಿಸಿದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಂಥಾಲಯ ಇಲಾಖೆಯ ಡಿಜಿಟಲೀಕರಣ ವ್ಯವಸ್ಥೆಯಿಂದಾಗಿ ಮನೆಯಲ್ಲೇ ಕುಳಿತು ಗ್ರಂಥಗಳ ಅಧ್ಯಯನ ಮಾಡುವಂತ ವ್ಯವಸ್ಥೆ ರೂಪಿಸಿರುವುದು ಅತ್ಯಂತ ಉಪಯುಕ್ತವಾಗಿದೆ ಎಂದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್ ಸೇರಿದಂತೆ ಗ್ರಂಥಾಲಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com