ಜಾರಕಿಹೊಳಿ ಸಿಡಿ ಪ್ರಕರಣ: ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರು ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
Published: 17th July 2021 07:11 AM | Last Updated: 17th July 2021 07:11 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರು ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಸಿಡಿ ಬಹಿರಂಗ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಎಸ್ಐಟಿ ರಚಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ಹಾಗೂ ಯುವತಿ ತನ್ನ ವಾದವನ್ನೂ ಆಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನಿನ್ನೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿರುವ ಕ್ರಮವನ್ನು ಪ್ರಶ್ನಿಸಲಾಗಿದೆ. ಆರೋಪಿಯ ಮನವಿ ಮೇರೆಗೆ ಗೃಹಮಂತ್ರಿಗಳು ಎಸ್‌ಐಟಿ ರಚಿಸಲು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ ಎಂಬ ಆರೋಪವಿದೆ.
ಹೀಗಾಗಿ, ಎಸ್‌ಐಟಿ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸುವ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಯಾವ ರೀತಿಯ ತನಿಖೆ ನಡೆಸಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಆದ್ದರಿಂದ ಸಂಪೂರ್ಣ ತನಿಖಾ ವರದಿಯನ್ನು ಸಲ್ಲಿಸಿ ಎಂದು ಪೀಠ ರಾಜ್ಯ ಅಡ್ವೊಕೇಟ್ ಜನರಲ್ ಅವರಿಗೆ ಸೂಚಿಸಿತು.
ಇದಕ್ಕೆ ಕೆಲಕಾಲ ಸಮಯಾವಕಾಶ ತೆಗೆದುಕೊಂಡ ಅಡ್ವೊಕೇಟ್ ಜನರಲ್, ಸೋಮವಾರ (ಜು.19) ಬೆಳಗ್ಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಸೋಮವಾರ ತನಿಖಾ ವರದಿ ಸಲ್ಲಿಸುವುದಾಗಿ ಅಡ್ವೊಕೇಟ್ ಜನರಲ್ ಹೇಳಿಕೆ ನೀಡಿದ ಹಿನ್ನೆಲೆ ವಿಚಾರಣೆಯನ್ನು ಪೀಠ ಮಂಗಳವಾರಕ್ಕೆ ಮುಂದೂಡಿತು.
ಇದೇ ವೇಳೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಹಾಗೂ ಅಲ್ಲಿವರೆಗೆ ದೂರು ಮುಕ್ತಾಯಗೊಳಿಸುವುದಿಲ್ಲ ಎಂದು ನೀಡಿರುವ ಭರವಸೆಯಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಸೂಚಿಸಿತು.