ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ: ಅಧಿಕಾರಿಗಳಿಂದ ಮಾಹಿತಿ ಪಡೆದ ಶೋಭಾ ಕರಂದ್ಲಾಜೆ

ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಸಭೆ ನಡೆಸಿ, ಮಾಹಿತಿ ಪಡೆದುಕೊಂಡರು.
ಭೂಕುಸಿತ
ಭೂಕುಸಿತ

ಮಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಸಭೆ ನಡೆಸಿ, ಮಾಹಿತಿ ಪಡೆದುಕೊಂಡರು.

ದೆಹಲಿಯ ಕೃಷಿ ಭವನದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಳೆಯಿಂದಾಗುತ್ತಿರುವ ತೊಂದರೆಗಳು, ಪ್ರಕೃತಿ ವಿಕೋಪಗಳ ಬಗ್ಗೆ ವರದಿ ಪಡೆದುಕೊಂಡರು. 

ಇದೇ ವೇಳೆ ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಜನರ ಕಷ್ಟ ನಷ್ಟಗಳಿಗೆ ನೆರವು ನೀಡುವ ಸಂದರ್ಭ ಒದಗಿ ಬಂದರೆ ತಕ್ಷಣವೇ ಸೂಕ್ತ ವ್ಯವಸ್ಥೆ ಹೊಂದಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲೆಯಲ್ಲಿನ ಕೋವಿಡ್ ನಿರ್ವಹಣೆ, 3ನೇ ಅಲೆಗೆ ಜಿಲ್ಲೆಗಳು ನಡೆಸಿರುವ ತಯಾರಿಗಳು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಚರ್ಚಿಸಿ ಶೋಭಾ ಕರಂದ್ಲಾಜೆ ಮಾಹಿತಿ ಪಡೆದುಕೊಂಡರು. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಭಾರೀ ಮಳೆಯ ಪರಿಣಾಮ ಗೋಕರ್ಣದ ಹಲವು ದೇವಾಲಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಇನ್ನು ಕರಾವಳಿ ಭಾಗದ ಶಿರಸಿ, ಸಿದ್ದಾಪುರ, ದಾಂಡೇಲಿ ಹಾಗೂ ಹಳಿಯಾಳದಲ್ಲಿಯೂ ಭಾರೀ ಮಳೆಯಾಗಿದ್ದು, ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ಗುಡ್ಡ ಕುಸಿದಿದೆ. ಕಾವೂರು ಗ್ರಾಮದ ಸುರೇಶ್ ಗೌಡ ಎನ್ನುವವರ ಮನೆಯ ಬಳಿ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿದ ರಭಸಕ್ಕೆ ಮನೆಯ ಮುಂದೆ ದೊಡ್ಡ ಕಲ್ಲುಬಂಡೆ ಉರುಳಿ ಬಂದಿದೆ. ಈ ಗುಡ್ಡದ ಮೇಲೆಯೇ ಶಾಲೆ ಕೂಡ ಇದ್ದು, ಹೆಚ್ಚಿನ ಕುಸಿತವಾದಲ್ಲಿ ಶಾಲೆಗೂ ತೊಂದರೆಯಾಗುವ ಆತಂಕ ಎದುರಾಗಿದೆ.

ಇನ್ನು ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿಯೂ ಹಲವು ಬಾರಿ ಭೂಕುಸಿತ ಸಂಭವಿಸಿದೆ. ಮಡಿಕೇರಿ, ಮಡೆನಾಡು ಮತ್ತು ಜೋಡುಪಾಲ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ರೂ.22 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಹೆದ್ದಾರಿಗೆ ಸಾಕಷ್ಟು ಹಾನಿಯುಂಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com