ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ: ರಾಜ್ಯಪಾಲರಿಗೆ ಸಂಸದೆ ಸುಮಲತಾ ಮನವಿ

ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಅಣೆಕಟ್ಟಿಗೆ ಅಪಾಯವಿದೆ, ರೈತರಿಗೆ ಅಪಾಯವಿದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಂಸದೆ ಸುಮಲತಾ ಅಂಬರೀಷ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಂಸದೆ ಸುಮಲತಾ ಅಂಬರೀಷ್ (ಸಂಗ್ರಹ ಚಿತ್ರ)
ಸಂಸದೆ ಸುಮಲತಾ ಅಂಬರೀಷ್ (ಸಂಗ್ರಹ ಚಿತ್ರ)

ಬೆಂಗಳೂರು: ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ಪ್ರಕರಣ ಈಗ ರಾಜ್ಯಪಾಲರ ಅಂಗಳಕ್ಕೆ ಬಂದು ನಿಂತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಅಣೆಕಟ್ಟಿಗೆ ಅಪಾಯವಿದೆ, ರೈತರಿಗೆ ಅಪಾಯವಿದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಂಸದೆ ಸುಮಲತಾ ಅಂಬರೀಷ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ನೂತನ ರಾಜ್ಯಪಾಲರಿಗೆ ಶುಭಾಶಯ ತಿಳಿಸಿ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕಲ್ಲು ಕ್ವಾರಿ, ಸ್ಫೋಟಕಗಳಿಂದ ಕೆಆರ್ ಎಸ್ ಜಲಾಶಯಕ್ಕೆ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ರೈತರಿಗೆ, ಬಡವರಿಗೆ ಯಾವ ರೀತಿಯ ಸಮಸ್ಯೆಗಳಾಗುತ್ತಿವೆ ಎಂಬುದನ್ನು ಮನವಿ ಸಲ್ಲಿಸಿ ವಿವರಿಸಿದ್ದೇನೆ ಎಂದರು.

ನೀಡಿರುವ ಮನವಿಯನ್ನು ಕೂಲಂಕಷವಾಗಿ ಓದಿ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದರು.

ಗಣಿ ಸಚಿವರಿಗೆ ಕಳೆದ ವಾರ ನೀಡಿದ್ದ ಮನವಿಗೆ ಅಲ್ಲಿ ಕಾರ್ಯಪಡೆಯನ್ನು ರಚಿಸಿ ವರದಿ ತಯಾರಿಸಿ ಆದಷ್ಟು ಶೀಘ್ರ ಒಂದು ಕ್ರಮ ಕೈಗೊಳ್ಳುತ್ತೇನೆ ಎಂದು ಗಣಿ ಸಚಿವ ಮುರುಗೇಶ್ ನಿರಾಣಿಯವರು ಕೂಡ ಪತ್ರ ಕಳುಹಿಸಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿ ಹಳ್ಳಿಗಳಲ್ಲಿ ರೈತರಿಗೆ, ಪರಿಸರಕ್ಕೆ ಯಾವ ಯಾವ ರೀತಿಯ ತೊಂದರೆಯಾಗುತ್ತಿದೆ ಎಂದು ಕೂಡ ನೋಡಬೇಕಾಗಿದೆ. ಕೆಆರ್ ಎಸ್ ಜಲಾಶಯದಿಂದ 7 ಕಿಲೋ ಮೀಟರ್ ನಂತರ ನಡೆಯುತ್ತಿರುವ ಸ್ಫೋಟಕಗಳಿಂದ ಜಲಾಶಯಕ್ಕೆ ಯಾವ ರೀತಿಯ ಅಪಾಯ ಮತ್ತು ಅನಾಹುತ ಮುಂದಿನ ದಿನಗಳಲ್ಲಿ ಆಗುವ ಸಾಧ್ಯತೆಯಿದೆ ಎಂದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಆದಷ್ಟು ಬೇಗ ಅಕ್ರಮ ಗಣಿಗಾರಿಕೆಗೆ ಅಂತ್ಯ ಹಾಡಬೇಕು ಎಂದು ಸುಮಲತಾ ಒತ್ತಾಯಿಸಿದರು.

ಮೈಸೂರು ಹೊಟೇಲ್ ಹಲ್ಲೆ ಪ್ರಕರಣ ಪೊಲೀಸರು ತನಿಖೆ ಮಾಡುತ್ತಿದ್ದಾರೆ: ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ ನಲ್ಲಿ ನಟ ದರ್ಶನ್ ಅವರಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರೇ ತನಿಖೆಗೆ ಆದೇಶ ಕೊಟ್ಟಿದ್ದಾರೆ, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಲಿ, ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com