ಪ್ರತ್ಯೇಕ ಘಟನೆ: ಆರ್​ಟಿಐ ಕಾರ್ಯಕರ್ತನ ಬರ್ಬರ ಹತ್ಯೆ, ಮತ್ತೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ

ರಾಜ್ಯದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ಆರ್​ಟಿಐ ಕಾರ್ಯಕರ್ತರ ಮೇಲೆ ಭೀಕರ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಆರ್​ಟಿಐ ಕಾರ್ಯಕರ್ತ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಹತ್ಯೆಯಾದ ಶೀಧರ್ ಹಾಗೂ ಹಲ್ಲೆಗೊಳಗಾದ ವೆಂಕಟೇಶ್
ಹತ್ಯೆಯಾದ ಶೀಧರ್ ಹಾಗೂ ಹಲ್ಲೆಗೊಳಗಾದ ವೆಂಕಟೇಶ್

ಬೆಂಗಳೂರು: ರಾಜ್ಯದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ಆರ್​ಟಿಐ ಕಾರ್ಯಕರ್ತರ ಮೇಲೆ ಭೀಕರ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಆರ್​ಟಿಐ ಕಾರ್ಯಕರ್ತ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪಟ್ಟಣದ ನಿವಾಸಿ, ಆರ್ಟಿಐ ಕಾರ್ಯಕರ್ತ ವೆಂಕಟೇಶ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 

ಮಾರಕಾಸ್ತ್ರಗಳೊಂದಿಗೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ವೆಂಕಟೇಶ್ರ ಬಲಗೈ ಹಾಗೂ ಬಲ ಕಾಲನ್ನು ಕತ್ತರಿಸಿದ್ದಾರೆ. 

ತಮ್ಮ ಕಚೇರಿಯಲ್ಲಿದ್ದ ವೆಂಕಟೇಶ್ ಅವರನ್ನು ಹೊರಗೆಳೆದಿರುವ ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ ಕೈ, ಕಾಲು ಕತ್ತರಿಸಿ ಪರಾರಿಯಾಗಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು ವೆಂಕಟೇಶ್ ವಿರುದ್ಧ ಚೆಕ್ ಬೌನ್ಸ್ ಹಾಗೂ ವಂಚನೆ ಪ್ರಕರಣಗಳಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಆದರೆ, ಇದನ್ನು ನಿರಾಕರಿಸಿರುವ ವೆಂಕಟೇಶ್ ಅವರ ಸಹೋದರ ಗೋವಿಂದರಾಜು ಎಸ್ ಅವರು, ನನ್ನ ಸಹೋದರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದ. ಈ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ ೆಂದು ಹೇಳಿದ್ದಾರೆ. 

ಸರ್ಕಾರಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಈ ಕುರಿತು ಸಹೋದರ ಮಾಹಿತಿ ಕೇಳಿದ್ದ. ಆದರೆ, ಪೊಲೀಸರು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅಣ್ಣ ವಿರುದ್ಧ ಇದ್ದ ಚೆಕ್ ಬೌನ್ಸ್ ಕೇಸ್ ವರ್ಷಗಳ ಹಿಂದೆಯೇ ಇತ್ಯರ್ಥಗೊಂಡಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ದುಷ್ಕರ್ಮಿಗಳ ಬಂಧಿಸಿ ಸತ್ಯಾಸತ್ಯತೆ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ. 

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ದಾಳಿಗೂ ವೆಂಕಟೇಶ್ ಆರ್'ಟಿಐ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ. 

ಘಟನೆ ಕುರಿತು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, ಆರೋಪಿಗಳನ್ನು ಶೀಘ್ರಗತಿಯಲ್ಲಿ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಮತ್ತೊಂದು ಘಟನೆ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ಎಡಿಬಿ ಕಾಲೇಜು ಬಳಿ ನಡೆದಿದೆ. ಆರ್ಟಿಐ ಕಾರ್ಯಕರ್ತರೊಬ್ಬರ ಮೇಲೆ ರಾಡ್ನಿಂದ ಹೊಡೆದು ಹತ್ಯೆ ಮಡಾಲಾಗಿದೆ. 

ವಾಲ್ಮೀಕಿ ನಗರದ ನಿವಾಸಿ ಶ್ರೀಧರ್ (40) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಲವು ಜನರಿದ್ದ ಗುಂಪು ಹತ್ಯೆ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. 

ಎಡಿಬಿ ಕಾಲೇಜಿನ ಆವರಣದಲ್ಲಿ ಶ್ರೀಧರ್ ಕ್ಯಾಂಟೀನ್ ಹಿಂಭಾಗದ ಸ್ಥಳದಲ್ಲಿ ಟೀ ಕುಡಿಯುತ್ತಾ ಕುಳಿತಿದ್ದಾಗ ಸಂಜೆ ವೇಳೆಯಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದ ನಾಲ್ವರು ದುಷ್ಕರ್ಮಿಗಳು, ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಪರಾರಿಯಾಗಿದ್ದಾರೆ.

ಬಳಿಕ ಹೋಟೆಲ್ ಸಿಬ್ಬಂದಿ ಘಟ‌ನೆ ಬಗ್ಗೆ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ. ನಂತರ ಶ್ರೀಧರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಧರ್ ಅವರ ಸಹೋದರಿ ಸರಸ್ವತಿಯವರು, ಶಾಸಕರೊಬ್ಬರ ಬೆಂಬಲಿಗರಿಂದ ಸಹೋದರನಿಗೆ ಆಗಾಗ ಬೆದರಿಕೆ ಕರೆಗಳು ಬರುತ್ತಲೇ ಇದ್ದವು. ಗ್ರಾಮ ಪಂಚಾಯಿತಿ ಚುನಾವಣೆಗೆ ಶಾಸಕರೊಬ್ಬ ಪುತ್ರ ಜನನ ಪ್ರಮಾಣ ಪತ್ರ ಸಲ್ಲಿಸಿದ್ದರು. ಈ ಕುರಿತು ನನ್ನ ಸಹೋದರ ಮಾಹಿತಿ ಕೇಳಿದ್ದರು. ಮಾಹಿತಿ ಕೇಳಿ ಸಲ್ಲಿಸಲಾಗಿರುವ ಪತ್ರವನ್ನು ವಾಪಸ್ ಪಡೆದುಕೊಳ್ಳುವಂತೆ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಕುರಿತು ಸಹೋದರ ಹೇಳಿಕೊಂಡಿದ್ದ. ಗುರುವಾರ ಸಂಜೆ ಟೀ ಕುಡಿಯುವ ಸಲುವಾಹಿ ಹೊರಗೆ ಹೋದ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. 

ಶಾಸಕನ ಪುತ್ರನ ಕೈವಾಡ ಕುರಿತು ಪ್ರತಿಕ್ರಿಯೆ ನೀಡಿರುವ ಬಳ್ಳಾರಿ ಜಿಲ್ಲಾ ಎಸ್'ಪಿ ಸೈದುಲು ಅದಾವತ್ ಅವರು, ಎಲ್ಲಾ ಆಯಾಮದಲ್ಲಿಯೂ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಮೂರು ತಂಡಗಳನ್ನೂ ರಚಿಸಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com