ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಆರಂಭ; ಡಿಲಿಮಿಟೇಷನ್ ಸಮಿತಿ ರಚನೆಯಾಗಿ 9 ತಿಂಗಳ ಬಳಿಕ ಮೊದಲ ಸಭೆ

ವಾರ್ಡ್‌ಗಳ ವಿಭಜನೆ ಮತ್ತು ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ರಚಿಸಿದ ಡಿಲಿಮಿಟೇಶನ್ ಸಮಿತಿ ಶನಿವಾರ ಮೊದಲ ಬಾರಿಗೆ ಸಭೆ ಸೇರಿದ್ದು, ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ವಾರ್ಡ್‌ಗಳ ವಿಭಜನೆ ಮತ್ತು ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ರಚಿಸಿದ ಡಿಲಿಮಿಟೇಶನ್ ಸಮಿತಿ ಶನಿವಾರ ಮೊದಲ ಬಾರಿಗೆ ಸಭೆ ಸೇರಿದ್ದು, ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.

2020 ರ ಅಕ್ಟೋಬರ್ 14 ರಂದು ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ವಾರ್ಡ್ ಗಳ ಸಂಖ್ಯೆಯನ್ನು 198 ರಿಂದ 243 ಕ್ಕೆ ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ಪ್ರಕ್ರಿಯೆಗಾಗಿ ರಾಜ್ಯ ಸರ್ಕಾರ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಡಿಲಿಮಿಟೇಷನ್ ಸಮಿತಿಯನ್ನೂ ಕೂಡ  ರಚನೆ ಮಾಡಿತ್ತು. ಆದರೆ ಸಮಿತಿ ರಚನೆಯಾಗಿ 6 ತಿಂಗಳೇ ಆದರೂ ಒಂದೂ ಸಭೆ ನಡೆದಿರಲಿಲ್ಲ. ಕೋವಿಡ್ ಸಾಂಕ್ರಾಮಿಕದಿಂದಾಗಿ ಸಮಿತಿ ಸಭೆ ಮುಂದೂಡಲಾಗಿತ್ತು. ಆದರೆ ವಾರ್ಡ್ ಗಳ ಪುನರ್ ವಿಂಗಡಣೆ ಕಾರ್ಯವನ್ನು ಸಮಿತಿಯು ಆರು ತಿಂಗಳಲ್ಲಿ ವ್ಯಾಯಾಮವನ್ನು ಪೂರ್ಣಗೊಳಿಸಬೇಕಾಗಿದ್ದು, ಶನಿವಾರ ಈ  ಸಂಬಂಧ ಸಮಿತಿ ತನ್ನ ಮೊದಲ ಸಭೆ ನಡೆಸಿದೆ.

ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ, ವಾರ್ಡ್‌ಗಳ ಹಾಗೂ ವಲಯಗಳ ಮರುವಿಂಗಡಣೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಸರ್ಕಾರ 2020ರ ಮಾರ್ಚ್‌ 24ರಂದು ಬಿಬಿಎಂಪಿ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿತ್ತು. ಈ ಮಸೂದೆಯನ್ನು ಶಾಸಕ ಎಸ್.ರಘು ಅಧ್ಯಕ್ಷತೆಯ ವಿಧಾನ  ಮಂಡಲದ ಜಂಟಿ ಸಲಹಾ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು. ಸಮಿತಿಯು 2020ರ ಸೆ. 15ರಂದು ವಿಧಾನಸಭಾಧ್ಯಕ್ಷರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಬಿಬಿಎಂಪಿ ಮಸೂದೆ ಅಂತಿಮಗೊಳ್ಳದ ಕಾರಣ ಸದ್ಯಕ್ಕೆ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ  ತರಬೇಕು. ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 250ಕ್ಕೆ ಹೆಚ್ಚಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಸಮಿತಿಯ ಶಿಫಾರಸನ್ನು ಒಪ್ಪಿದ್ದ ಸರ್ಕಾರ ವಾರ್ಡ್‌ಗಳ ಸಂಖ್ಯೆಯನ್ನು ಗರಿಷ್ಠ 250ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸಿ 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. 2020ರ ಅ. 14ರಂದು ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ಕೌನ್ಸಿಲ್‌ ಸದಸ್ಯರ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಿತ್ತು.  ವಾರ್ಡ್‌ಗಳ ಮರುವಿಂಗಡಣೆಗಾಗಿ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಅದೇ ದಿನ ಸಮಿತಿಯನ್ನೂ ರಚಿಸಲಾಗಿತ್ತು. ಈ ಸಮಿತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು, ಬಿಬಿಎಂಪಿಯ ವಿಶೇಷ ಆಯುಕ್ತರು (ಕಂದಾಯ) ಸದಸ್ಯರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಗೌರವ್ ಗುಪ್ತಾ, 'ಇಲ್ಲಿಯವರೆಗೆ ಏನಾಗಿದೆ, ಸಮಿತಿಯನ್ನು ಏಕೆ ರಚಿಸಲಾಗಿದೆ ಮತ್ತು ಏನು ಮಾಡಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ಸಭೆ ನಡೆಸಲಾಯಿತು. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ವಾರ್ಡ್‌ ಮರುವಿಂಗಡಣೆ ಮಾಡುವ ಕುರಿತು  ಸಮಿತಿಯು ಮೊದಲ ಸಭೆಯನ್ನು ಶನಿವಾರ ನಡೆಸಿದ್ದೇವೆ. ಈ ಕುರಿತು ಏನೆಲ್ಲ ಸಿದ್ಧತೆ ನಡೆಸಲಾಗಿದೆ ಎಂಬ ಕುರಿತು ಸಮಾಲೋಚನೆ ನಡೆಸಿದ್ದೇವೆ. ಬಿಬಿಎಂಪಿಗೆ ಯಾವೆಲ್ಲ ಪ್ರದೇಶಗಳು ಸೇರ್ಪಡೆ ಆಗಬೇಕಿದೆ ಎಂಬ ಕುರಿತು ಸಲ್ಲಿಕೆ ಆಗಿರುವ ಬೇರೆ ಬೇರೆ ಪ್ರಸ್ತಾವನೆಗಳು ಬೇರೆ ಬೇರೆ ಹಂತದಲ್ಲಿವೆ. ಈ ಬಗ್ಗೆ ಈ  ಹಂತದಲ್ಲಿ ಏನೂ ಹೇಳಲಾಗದು. ಕೆಲವು ಪ್ರಸ್ತಾವನೆಗಳು ಬೆಂಗಳೂರು ನಗರ ಜಿಲ್ಲಾಡಳಿತದ ಮುಂದಿವೆ. ಕೆಲವು ಪ್ರಸ್ತಾವನೆಗಳು ಬಿಬಿಎಂಪಿಯ ಮುಂದಿವೆ. ಯಾವ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿಂದೆ ಯಾವ ರೀತಿ ಮರುವಿಂಗಡಣೆ ನಡೆಸಲಾಗಿತ್ತು, ಏನು ಕ್ರಮ ಕೈಗೊಳ್ಳಲಾಗಿತ್ತು. ಇನ್ನು ಮುಂದೆ  ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಎಂಬ ಪ್ರಾರಂಭಿಕ ಹಂತದ ಸಮಾಲೋಚನೆ ನಡೆಸಿದ್ದೇವೆ ಎಂದರು.

ಅಂತೆಯೇ ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ಈಗಿರುವಷ್ಟೇ ಉಳಿಸಿಕೊಂಡು ವಾರ್ಡ್‌ಗಳ ಸಂಖ್ಯೆಯನ್ನು ಮಾತ್ರ ಹೆಚ್ಚಿಸಲು ಸರ್ಕಾರ ಆರಂಭದಲ್ಲಿ ಚಿಂತನೆ ನಡೆಸಿತ್ತು. ನಂತರ ಗಡಿ ಪ್ರದೇಶದಲ್ಲಿ 1 ಕಿ.ಮೀ ವ್ಯಾಪ್ತಿಯ ಗ್ರಾಮಗಳನ್ನು ಬಿಬಿಎಂಪಿ ತೆಕ್ಕೆಗೆಸೇರಿಸಿಕೊಳ್ಳಲು ನಿರ್ಧರಿಸಿತ್ತು. ಯಾವ ಪ್ರದೇಶಗಳು  ಬಿಬಿಎಂಪಿಗೆ ಸೇರ್ಪಡೆಯಾಗಬೇಕು ಎಂಬ ಕುರಿತು ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಹೊಸ ವಾರ್ಡ್‌ಗಳ ಹಾಗೂ ವಲಯಗಳ ವ್ಯಾಪ್ತಿ ಹಾಗೂ ಗಡಿಗಳನ್ನೂ ನಿರ್ಧರಿಸುವ ಕುರಿತೂ ಸಲಹೆ ನೀಡಲಿದೆ.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಎನ್‌.ಮಂಜುನಾಥ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ರಾಜೇಶ್‌ ಗೌಡ, ಬಿಬಿಎಂಪಿ ವಿಶೇಷ ಆಯುಕ್ತ ಕಂದಾಯ ಎಸ್‌.ಬಸವರಾಜು ಅವರು ಸಭೆಯಲ್ಲಿ ಭಾಗವಹಿಸಿದ್ದರು.   
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com