'ಜಲ್ ಜೀವನ್ ಮಿಷನ್' ಯೋಜನೆ ಕುರಿತಾಗಿ ಕರ್ನಾಟಕ ಕಠಿಣ ಶ್ರಮವಹಿಸಿ ಕೆಲಸ ಮಾಡಬೇಕು: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್

2024 ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಜಲ್ ಜೀವನ್ ಮಿಷನ್' ಯೋಜನೆ ಕುರಿತಾಗಿ ಕರ್ನಾಟಕ ಸರ್ಕಾರ ಕಠಿಣ ಶ್ರಮವಹಿಸಿ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಜಲಶಕ್ತಿ ಸಚಿವ  ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಮುಖ್ಯಮಂತ್ರಿ ಚರ್ಚೆ
ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಮುಖ್ಯಮಂತ್ರಿ ಚರ್ಚೆ

ಬೆಂಗಳೂರು: 2024 ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಜಲ್ ಜೀವನ್ ಮಿಷನ್' ಯೋಜನೆ ಕುರಿತಾಗಿ ಕರ್ನಾಟಕ ಸರ್ಕಾರ ಕಠಿಣ ಶ್ರಮವಹಿಸಿ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಜಲಶಕ್ತಿ ಸಚಿವ  ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನವನ್ನು ನಿರಂತರವಾಗಿ ಗಮನಿಸುತ್ತಿದ್ದು, ಅದರ ಯೋಜನೆ ಜಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮತ್ತು ರಾಷ್ಟ್ರೀಯ ಯೋಜನೆಯ ಪ್ರಗತಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ವಿಶೇಷ ಸಂದರ್ಶನ ನೀಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, 'ಕರ್ನಾಟಕ ನಿಧಾನವಾಗಿ ಪ್ರಗತಿ ಹೊಂದುತ್ತಿರುವ ರಾಜ್ಯವಾಗಿದ್ದು, ಇಲ್ಲಿ ಈ ಮಹತ್ವದ ಯೋಜನೆ ಜಾರಿಗೆ ಕಠಿಣ ಶ್ರಮವಹಿಸುವ ಅಗತ್ಯವಿದೆ ಎಂದು ಹೇಳಿದರು. ಅಂತೆಯೇ  ಮೇಕೆದಾಟು ಯೋಜನೆಯ ಕುರಿತು ಮಾತನಾಡಿದ ಅವರು ಕರ್ನಾಟಕ ಮತ್ತು ತಮಿಳುನಾಡು ಇಬ್ಬರೂ ಒಟ್ಟಿಗೆ ಕುಳಿತು ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.

ಸಂದರ್ಶನದ ಆಯ್ದ ಭಾಗಗಳು ಇಲ್ಲಿದೆ.

*ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರದ ನಿಲುವು ಏನು?
ಇದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಐತಿಹಾಸಿಕ ವಿವಾದವಾಗಿದೆ. ಭಾರತ ಸರ್ಕಾರ ನಿಷ್ಪಕ್ಷಪಾತವಾಗಿರಬೇಕು ಮತ್ತು ಎಲ್ಲಾ ರಾಜ್ಯಗಳಿಗೆ ನ್ಯಾಯ ಒದಗಿಸಬೇಕು. ನಾವು ಆ ತತ್ತ್ವದ ಮೇಲೆ ಕೆಲಸ ಮಾಡುತ್ತೇವೆ.

*ಮೇಕೆದಾಟು ಕುಡಿಯುವ ನೀರಿನ ಯೋಜನೆಯಾಗಿದ್ದು, ತಮಿಳುನಾಡಿನ ನೀರಿನ ಪಾಲನ್ನು ಬಿಡುಗಡೆ ಮಾಡುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿದೆಯೇ?
ಇದು (ವಿವಾದ) ಜಲವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯವಾಗಿರಬೇಕು, ಆದರೆ ದುರದೃಷ್ಟವಶಾತ್ ಇದು ಭಾವನೆಗಳು ಮತ್ತು ರಾಜಕೀಯದ ವಿಷಯವಾಗಿ ಮಾರ್ಪಟ್ಟಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಎಲ್ಲಾ ರಾಜ್ಯಗಳು ಒಮ್ಮತದೊಂದಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನಾವು ಅದನ್ನು  ಎಲ್ಲರೊಂದಿಗೆ ಚರ್ಚಿಸುತ್ತೇವೆ ಮತ್ತು ಅದನ್ನು ಪೂರ್ಣಗೊಳಿಸುತ್ತೇವೆ.

*ನೀವು ಆ ಪ್ರಯತ್ನ ಮಾಡುತ್ತೀರಾ? ನೀವು ಯಾವಾಗ ಉಭಯ ರಾಜ್ಯಗಳ ಸಭೆಯನ್ನು ಕರೆಯುತ್ತೀರಾ?
ಖಂಡಿತವಾಗಿ, ಇದು ನನ್ನ ಕರ್ತವ್ಯವಾಗಿದ್ದು ಅಗತ್ಯವಿದ್ದರೆ, ನಾವು ಸಭೆಯನ್ನು ಕರೆಯಬಹುದು. ಅಲ್ಲದೆ, ಕೆಲವು ರಾಜಕೀಯ ಕಾರಣಗಳಿಂದಾಗಿ ರಾಜ್ಯಗಳು ಒಪ್ಪದಿದ್ದರೆ, ನಾವು ಇತರ ಆಯ್ಕೆಗಳನ್ನು ಗುರುತಿಸಬೇಕು. ಒಂದು ಅಥವಾ ಇನ್ನೊಂದು ರಾಜ್ಯದ ಪ್ರತಿರೋಧದಿಂದಾಗಿ ಸಂಪನ್ಮೂಲಗಳನ್ನು ವ್ಯರ್ಥ  ಮಾಡಲಾಗುವುದಿಲ್ಲ. ಅಂತಿಮವಾಗಿ, ಯಾವುದೇ ಸಮಸ್ಯೆಯನ್ನು ಚರ್ಚೆಯ ಮೂಲಕ ಪರಿಹರಿಸಬಹುದು. ಆದರೆ ಎರಡೂ ರಾಜ್ಯಗಳು ಒಟ್ಟಾಗಿ ಕುಳಿತು ಚರ್ಚಿಸಬೇಕು.

*ತಮಿಳುನಾಡು ಒತ್ತಡ ಹೇರುತ್ತಿದ್ದು, ಇದರಿಂದಾಗಿಯೇ ಕೇಂದ್ರ ಸರ್ಕಾರವು ನಿಧಾನಗತಿ ಅನುಸರಿಸುತ್ತಿದೆ ಎಂಬ ಭಾವನೆ ಇದೆ?
ಇಲ್ಲ, ನಾನು ಹಾಗೆ ಯೋಚಿಸುವುದಿಲ್ಲ. ಸರ್ವೋಚ್ಛ ನ್ಯಾಯಾಲಯದಲ್ಲಿ ರಾಜ್ಯಗಳು ಇದನ್ನು ಪ್ರಶ್ನಿಸಿರುವುದರಿಂದ ಈ ವಿಷಯವು ಉಪ-ನ್ಯಾಯವಾಗಿದೆ.

*ಜಲ್ ಜೀವನ್ ಮಿಷನ್ ಗೆ ಸಂಬಂಧಿಸಿದಂತೆ ಕರ್ನಾಟಕದ ಸಾಧನೆ ಹೇಗಿದೆ?
ಕರ್ನಾಟಕ ನಿಧಾನವಾಗಿ ಪ್ರಗತಿ ಹೊಂದುತ್ತಿರುವ ರಾಜ್ಯ. ನಾವು ಯೋಜನೆಯ ಅನುಷ್ಠಾನವನ್ನು ಸಿಎಂ ಮತ್ತು ಅಧಿಕಾರಿಗಳೊಂದಿಗೆ ಪರಿಶೀಲಿಸಿದ್ದೇವೆ. ದೇಶದ ಪರಿಸ್ಥಿತಿಗೆ ಅನುಗುಣವಾಗಿ ಕರ್ನಾಟಕ ನಿಖರವಾಗಿ ಏನು ಮಾಡುತ್ತಿದೆ ಎಂದು ಅವರಿಗೆ ತಿಳಿಸಿದೆವು. ಅಂತೆಯೇ ಅದರ ಅನುಷ್ಠಾನವನ್ನು  ವೇಗಗೊಳಿಸಲು ನಾವು ಸೂಚಿಸಿದ್ದೇವೆ. ಯೋಜನೆಯ ರಾಷ್ಟ್ರೀಯ ಸರಾಸರಿ ವೇಗ ಸುಮಾರು ಶೇ41ಕ್ಕೆ ತಲುಪಿದೆ, ಆದರೆ ಕರ್ನಾಟಕದಲ್ಲಿ ಇದು ಸುಮಾರು ಶೇ.34 ಆಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಇನ್ನೂ ಶ್ರಮಪಟ್ಟು ಕೆಲಸ ಮಾಡಬೇಕಾಗಿದೆ. ರಾಷ್ಟ್ರೀಯ ಸರಾಸರಿಗೆ ಹತ್ತಿರಬರಬೇಕಿದೆ.

*ಈ ಹಣಕಾಸು ವರ್ಷದಲ್ಲಿ ರಾಜ್ಯವು 25 ಲಕ್ಷ ನೀರಿನ ಸಂಪರ್ಕಗಳ ಗುರಿಯನ್ನು ಹೊಂದಿದೆ. ಅದು ರಾಜ್ಯವನ್ನು ರಾಷ್ಟ್ರೀಯ ಸರಾಸರಿಗೆ ಹೇಗೆ ಸಮನಾಗಿ ತರುತ್ತದೆ?
ಅದನ್ನು ಸಾಧಿಸಲು ಅವರು ಶ್ರಮಿಸಬೇಕು. ಇದು ಸಾಧಿಸಲಾಗದ್ದೇನೂ ಅಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡಿದರೆ ಅದನ್ನು ಮಾಡಬಹುದು.

*ರಾಜ್ಯವು ಗಮನಹರಿಸಬೇಕಾದ ಯಾವುದೇ ನಿರ್ದಿಷ್ಟ ಅಂಶಗಳೇನು?
ಜಲ ಜೀವನ್ ಮಿಷನ್ ನೀರು ಸರಬರಾಜುಗಾಗಿ ಮೂಲಸೌಕರ್ಯ ರಚಿಸುವ ಕಾರ್ಯಕ್ರಮ ಮಾತ್ರವಲ್ಲ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ನೀರಿನ ಸುಸ್ಥಿರ ಮೂಲಗಳಿಲ್ಲ. ಅವರು ಅದಕ್ಕಾಗಿ ತಯಾರಿ ನಡೆಸಬೇಕಾಗಿದೆ. ಸೇವಾ ವಿತರಣೆಯು ಮಿಷನ್‌ನ ಪ್ರಮುಖ ಭಾಗವಾಗಿದೆ. ಕ್ರಿಯಾತ್ಮಕತೆ ಅಥವಾ ಸೇವಾ  ವಿತರಣೆಯು ಮೂರು ವಿಭಿನ್ನ ಘಟಕಗಳನ್ನು ಅವಲಂಬಿಸಿರುತ್ತದೆ - ಪ್ರಮಾಣ, ಗುಣಮಟ್ಟ ಮತ್ತು ಆವರ್ತನ. ದಿನಕ್ಕೆ 55 ಲೀಟರ್ ತಲಾ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ನಿಗದಿತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳಬೇಕು. ನಾವು ಮೂರನೇ ವ್ಯಕ್ತಿಯಿಂದ  ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಿದಾಗ, ಕರ್ನಾಟಕವು ಪ್ರಮಾಣ ಮತ್ತು ಕ್ರಮಬದ್ಧತೆಯ ಮಾನದಂಡಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆ ಅಂಶಗಳಲ್ಲಿ, ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಆದರೆ ಇನ್ನೂ, ಗುಣಮಟ್ಟದ ಮಾನದಂಡಗಳ ವಿಷಯದಲ್ಲಿ  ಬಹಳಷ್ಟು ಕೆಲಸ ಮಾಡಬೇಕಾಗಿದೆ.

*ಗುಣಮಟ್ಟದ ಮಾನದಂಡಗಳನ್ನು ಕಾಪಾಡಿಕೊಳ್ಳಲು ಖಚಿತಪಡಿಸಿಕೊಳ್ಳಲು ಏನು ಮಾಡಲಾಗುತ್ತಿದೆ?
ನೀವು ತಿಳಿದುಕೊಳ್ಳಬೇಕಾದಂತೆ ಗುಣಮಟ್ಟವು ಮುಖ್ಯವಾದದ್ದು ಮತ್ತು ನೀವು ಕುಡಿಯುವ ನೀರಿನ ಗುಣಮಟ್ಟವನ್ನು ತಿಳಿದುಕೊಳ್ಳುವುದು ನಿಮ್ಮ ಹಕ್ಕು. ದೇಶದ ಎಲ್ಲ ಜಿಲ್ಲೆಗಳಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಒಂದು ಮಾನ್ಯತೆ ಪಡೆದ ಪ್ರಯೋಗಾಲಯವನ್ನು ಹೊಂದಲು ನಾವು ನಿರ್ಧರಿಸಿದ್ದೇವೆ. ನಾವು  ರಾಜ್ಯಗಳಿಗೆ ಹಣವನ್ನು ನೀಡಿದ್ದೇವೆ. ಮುಂದಿನ ಹಂತದಲ್ಲಿ, ನಾವು ಅವರನ್ನು ಬ್ಲಾಕ್ ಮಟ್ಟಕ್ಕೆ ಕರೆದೊಯ್ಯುತ್ತೇವೆ. 

*ಇದು ಮೋದಿ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಎಂದು ಪರಿಗಣಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ ಎಷ್ಟು; 2024 ಗುರಿಯನ್ನು ಸಾಧಿಸುವ ವಿಶ್ವಾಸವಿದೆಯೇ?
ನಾವು 2024 ಅನ್ನು ಗುರಿಯಾಗಿಟ್ಟುಕೊಂಡಿದ್ದೇವೆ ಮತ್ತು ಅದರಂತೆಯೇ ನಾವು ಮುಂದೆ ಸಾಗುತ್ತಿದ್ದೇವೆ, ಆ ಸಮಯಕ್ಕೆ ಯೋಜನೆಯ 3,60,000 ಕೋಟಿ ರೂ.ಗಳ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ನನಗೆ ಖಾತ್ರಿಯಿದೆ. ಅದರಲ್ಲಿ 2,40,000 ಕೋಟಿ ರೂ.ಗಳನ್ನು ಭಾರತ ಸರ್ಕಾರ ಮತ್ತು ಉಳಿದ  ಹಣವನ್ನು ರಾಜ್ಯ ಸರ್ಕಾರಗಳು ಖರ್ಚು ಮಾಡಲಿವೆ.

*ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವ ವಿಚಾರ ಏನಾಯಿತು?
ರಾಷ್ಟ್ರೀಯ ಯೋಜನಾ ಸ್ಥಾನಮಾನವನ್ನು ನೀಡುವುದು ಪ್ರಧಾನಿ ಅಥವಾ ಕ್ಯಾಬಿನೆಟ್‌ನ ಅಧಿಕಾರ. ಈ ವಿಷಯವು ಇನ್ನೂ ಸಮರ್ಥ ಪ್ರಾಧಿಕಾರವನ್ನು ತಲುಪಿಲ್ಲ. ಕೇಂದ್ರ ಜಲ ಆಯೋಗದಿಂದ ಕೆಲವು ಅವಲೋಕನಗಳು ನಡೆದಿದ್ದು, ಅದನ್ನು ರಾಜ್ಯವು ಪೂರೈಸಿದೆ. ಹೂಡಿಕೆ ಸಮಿತಿ ಮತ್ತು ತಾಂತ್ರಿಕ ಸಮಿತಿ ಇದನ್ನು  ತೆರವುಗೊಳಿಸಿದೆ. ಈಗ, ನಾವು ಇತರ ಔಪಚಾರಿಕತೆಗಳ ಮೂಲಕ ಮುನ್ನಡೆಸಬೇಕಿದೆ. ಇದಕ್ಕಾಗಿ ಕಾರ್ಯದರ್ಶಿಗಳ ಸಮೂಹವೇ ಇದ್ದು, ಅದು ಯೋಜನೆ ಮತ್ತು ಅದರ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ ಮತ್ತು ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಅವರು ಅದನ್ನು ಸಂಪುಟಕ್ಕೆ ಶಿಫಾರಸು  ಮಾಡುತ್ತಾರೆ. ಪ್ರಸ್ತುತ ಅದು ಪ್ರಗತಿಯಲ್ಲಿದೆ.

ಅಂತೆಯೇ ಕೃಷ್ಣ ನದಿ ನೀರು ನ್ಯಾಯಮಂಡಳಿಯ ಆದೇಶವನ್ನು ಅಧಿಸೂಚನೆ ಮಾಡುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಒತ್ತಾಯಿಸುತ್ತಿವೆ. ಆದರೆ ಈ ಪ್ರಕರಣಗಳು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿವೆ ಎಂದು ಶೇಖಾವತ್ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com