ಆರೋಗ್ಯ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸುವ ಕೃತಜ್ಞ ವಾಹನಕ್ಕೆ ನಟ ರಮೇಶ್ ಅರವಿಂದ್ ಚಾಲನೆ
ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅವರ ಋಣ ಎಲ್ಲರ ಮೇಲೂ ಇದೆ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ.
Published: 19th July 2021 09:07 PM | Last Updated: 20th July 2021 01:47 PM | A+A A-

ಕೃತಜ್ಞ ವಾಹನಕ್ಕೆ ನಟ ರಮೇಶ್ ಅರವಿಂದ್ ಚಾಲನೆ
ಬೆಂಗಳೂರು: ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅವರ ಋಣ ಎಲ್ಲರ ಮೇಲೂ ಇದೆ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ.
ನಗರದ ಟೆನ್ನಿಸ್ ಅಸೋಸಿಯೇಷನ್ ನಲ್ಲಿ ಕಾವೇರಿ ಆಸ್ಪತ್ರೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಕೃತಜ್ಞ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2 ವರ್ಷದಿಂದ ವಿಶ್ವಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ವಾರಿಯರ್ಸ್ ಗಳಿಂದ ಇಂದು ನಾವೆಲ್ಲಾ ಜೀವಂತವಾಗಿದ್ದೇವೆ. ತಾಯಿಯ ಋಣದಂತೆ ಕೋವಿಡ್ ವಾರಿಯರ್ಸ್ ಗಳ ಋಣ ತೀರಿಸುವುದು ಅಸಾಧ್ಯ ಎಂದರು.
ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ಭಾಸ್ಕರನ್ ಮಾತನಾಡಿ, ಕೋವಿಡ್ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಜುಲೈ 31ರಂದು ಕೃತಜ್ಞಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರ ಭಾಗವಾಗಿ ಇಂದಿನಿಂದ 12 ದಿನಗಳಲ್ಲಿ ನಮ್ಮ ತಂಡ 5 ವಾಹನಗಳಲ್ಲಿ ನಗರದ 300ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಿದೆ. ಜೊತೆಗೆ ಕೋವಿಡ್ ಚಿಕಿತ್ಸೆಗಾಗಿ ಹೊಸ ಆವಿಷ್ಕಾರ ಮಾಡಿದ ಆಸ್ಪತ್ರೆಗಳಿಗೆ ವಿಶೇಷ ವರ್ಗದಲ್ಲಿ ಪಶಸ್ತಿ ನೀಡಲಿದ್ದೇವೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ವಾರಿಯರ್ಸ್ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ 2 ಲಕ್ಷದವರೆಗೆ ವಿದ್ಯಾರ್ಥಿ ವೇತನ ಹಾಗೂ ಪದವೀದರ ಮಕ್ಕಳಿಗೆ ಉದ್ಯೋಗ ಕೊಡಿಸಲು ಮುಂದಾಗಿದ್ದೇವೆ. ಸಂಬಂಧಪಟ್ಟ ಕುಟುಂಬಗಳು ನೋಂದಣಿ ಮಾಡಿಕೊಳ್ಳಬಹುದು ಎಂದರು. ಮೊದಲ ದಿನದಂದು ತಂಡ ಕೃತಜ್ಞಾ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಅಲ್ಲಿನ ಸಿಬ್ಬಂದಿಯನ್ನು ಸನ್ಮಾನಿಸಿತು. ಈ ವೇಳೆ ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ವಿಲ್ಫೆಂಡ್ ಸ್ಯಾಮ್ಸನ್ ಉಪಸ್ಥಿತರಿದ್ದರು.