ಎಸ್ಎಸ್ಎಲ್'ಸಿ ಪರೀಕ್ಷೆಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ: ಸಚಿವ ಸುರೇಶ್ ಕುಮಾರ್

ಎಸ್ಎಸ್ಎಲ್'ಸಿ ಪರೀಕ್ಷೆಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಕೋವಿಡ್ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಡೆಸ್ಕ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 
ಸುರೇಶ್ ಕುಮಾರ್
ಸುರೇಶ್ ಕುಮಾರ್

ಬೆಂಗಳೂರು: ಎಸ್ಎಸ್ಎಳ್'ಸಿ ಪರೀಕ್ಷೆಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೋವಿಡ್ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಡೆಸ್ಕ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಬಾರಿ ಪರೀಕ್ಷಾ ಕೇಂದ್ರ, ಕೊಠಡಿ ಹಾಗೂ ಸಿಬ್ಬಂದಿ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಮಕ್ಕಳು ಮತ್ತು ಪೋಷಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಪರೀಕ್ಷೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಲಿದ್ದಾರೆ ಎಂದು ಹೇಳಿದ್ದಾರೆ. 

ಕಳೆದ ಬಾರಿ 3310 ಇದ್ದ ಪರೀಕ್ಷಾ ಕೇಂದ್ರಗಳನ್ನು 4885 ಹಾಗೂ 48000 ಪರೀಕ್ಷಾ ಕೊಠಡಿಗಳನ್ನು 73064 ಕ್ಕೆ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆದಷ್ಟು ಅವರಿಗೆ ಹತ್ತಿರವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ.

ಕಳೆದ ಬಾರಿ 6 ದಿನಗಳು 10 ನೇ ತರಗತಿ ಪರೀಕ್ಷೆ ಮಾಡಿದ ಅನುಭವವಿದೆ. ಈ ಬಾರಿ ಕೋವಿಡ್ ಕಾರಣದಿಂದ 2 ದಿನಗಳ ಕಾಲ ಪರೀಕ್ಷೆ ಮಾಡುತ್ತಿರುವುದರಿಂದ ಕಳೆದ ಬಾರಿಗಿಂತ ಉತ್ತಮವಾಗಿ ಈ ಬಾರಿ ಇಲಾಖೆಯಿಂದ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

ಕೋವಿಡ್ ಪಾಸಿಟೀವ್ ಇರುವ ವಿದ್ಯಾರ್ಥಿಗಳಿಗೆ ಹತ್ತಿರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜ್ವರ ಕೆಮ್ಮು ನೆಗಡಿ ಅಂತಹ ಲಕ್ಷಣ ಕಂಡುಬಂದ ವಿದ್ಯಾಥಿ೯ಗಳಿಗೆ ಪರೀಕ್ಷಾ ಕೇಂದ್ರಗಳಲ್ಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಅವರಿಗೆ ಎನ್ 95 ಮಾಸ್ಕ್ ನೀಡಲಾಗುವುದು. ಮಾಸ್ಕ್ ಮರೆತು ಬಂದ ವಿದ್ಯಾಥಿ೯ ಗಳಿಗೂ ಸಹ ಮಾಸ್ಕ್ ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. 

ಮಳೆ ಹಾಗೂ ಆರೋಗ್ಯ ತಪಾಸಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೆಲ ಗಂಟೆ ಮುಂಚಿತವಾಗಿ ಹೋಗುವುದು ಒಳ್ಳೆಯದು. ಹೋದ ಕೂಡಲೇ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಒಳಗೆ ಬಿಡಲಿದ್ದಾರೆ. ಪರೀಕ್ಷೆ ಆರಂಭಕ್ಕೆ ಬೆಲ್ ಹೊಡೆಯುವವರೆಗೂ ಕೊಠಡಿಯ ಒಳಗೆ ಕೂತು ಓದಿಕೊಳ್ಳಬಹುದು. 

ಬೆಲ್ ಆದ ಬಳಿಕ ಹೊರಗೆ ಬಂದು ತಮ್ಮ ಬ್ಯಾಗ್ ಇಟ್ಟು ಮತ್ತೆ ಪರೀಕ್ಷಾ ಕೊಠಡಿಗೆ ತೆರಳಲು ಅವಕಾಶ ನೀಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಹಾಗೂ ತಮ್ಮ ಮಕ್ಕಳನ್ನು ಕರೆತರುವ ಪೋಷಕರು ಸಂಪೂರ್ಣ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com