ಬ್ಯಾಂಕ್'ನಲ್ಲಿ ರೌಡಿಶೀಟರ್ ಕೊಲೆ ಪ್ರಕರಣ: ಹಂತಕರಿಗಾಗಿ ನೆರೆರಾಜ್ಯಗಳಲ್ಲಿ ಪೊಲೀಸರ ಶೋಧ

ಹಾಡಹಗಲೇ ಬ್ಯಾಂಕ್ ನಲ್ಲಿ ರೌಡಿಶೀಟರ್ ನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಇದೀಗ ಹಂತಕರಿಗಾಗಿ ನೆರೆ ರಾಜ್ಯಗಳಲ್ಲಿಯೂ ಶೋಧ ಆರಂಭಿಸಿದ್ದಾರೆಂದು ತಿಳಿದುಬಂದಿದೆ.
ಹತ್ಯೆಯಾದ ರೌಡಿಶೀಟರ್ ಬಬ್ಲಿ
ಹತ್ಯೆಯಾದ ರೌಡಿಶೀಟರ್ ಬಬ್ಲಿ

ಬೆಂಗಳೂರು: ಹಾಡಹಗಲೇ ಬ್ಯಾಂಕ್ ನಲ್ಲಿ ರೌಡಿಶೀಟರ್ ನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಇದೀಗ ಹಂತಕರಿಗಾಗಿ ನೆರೆ ರಾಜ್ಯಗಳಲ್ಲಿಯೂ ಶೋಧ ಆರಂಭಿಸಿದ್ದಾರೆಂದು ತಿಳಿದುಬಂದಿದೆ. 

ಬೆಂಗಳೂರಿನ ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್‌ ಶಾಖೆಗೆ ನುಗ್ಗಿದ್ದ ದುಷ್ಕರ್ಮಿಗಳ ತಂಡ ರೌಡಿಶೀಟರ್​ಬಬ್ಲಿ ಎಂಬಾತನನ್ನು ಬ್ಯಾಂಕ್ ಒಳಗೇ ಕೊಲೆ ಮಾಡಿದ್ದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಆರೋಪಿಗಳು ಹತ್ಯೆ ಮಾಡಿ ದ್ವಿಚಕ್ರ ವವಾಹನದಲ್ಲಿ ಪರಾರಿಯಾಗಿದ್ದರು.

ಹತ್ಯೆಯಾದ ಬಬ್ಲಿಗೆ ಶಾಂತಿನಗರ ನಾಗನೊಂದಿಗೆ ಹಳೆಯ ವೈರತ್ವ ಇತ್ತು. ಹತ್ಯೆ ಹಿಂದೆ ಈತನ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಬಬ್ಲಿಯನ್ನು ಹತ್ಯೆ ಮಾಡಬೇಕೆಂದು ಹಲವು ವರ್ಷಗಳಿಂದ ನಾಗಾ ಹೊಂಚು ಹಾಕಿಕೊಂಡಿದ್ದ, ವರ್ಷಗಳ ಹಿಂದೆ ಕೊಲೆ ಯತ್ನ ಕೂಡ ನಡೆದಿತ್ತು. ಆದರೆ, ಅದೃಷ್ಟವಶಾತ್ ಬಬ್ಲಿಗೆ ಪ್ರಾಣಾಪಾಯದಿಂದ ಪಾರಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಪ್ರಕರಣ ಸಂಬಂಧ ಈವರೆಗೂ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 

ತಮ್ಮ ಮಕ್ಕಳು ಓದುತ್ತಿದ್ದ ಶಾಲೆಗೆ ಭೇಟಿ ನೀಡಿದ್ದ ಬಬ್ಲಿ ನಂತರ ಬ್ಯಾಂಕ್'ಗೆ ಬಂದಿದ್ದ. ಬ್ಯಾಂಕ್ ಬಳಿಕ ಬಬ್ಲಿ ವಾಹನವನ್ನು ನಿಲ್ಲಿಸುತ್ತಿದ್ದಂತೆಯೇ ಮೂವರು ವ್ಯಕ್ತಿಗಳು ಬಬ್ಲಿ ಬೆನ್ನಟ್ಟಿದ್ದಾರೆ. ಕೂಡಲೇ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಬಬ್ಲಿ ಬ್ಯಾಂಕ್ ಮ್ಯಾನೇಜರ್ ಚೇಂಬರ್ ಒಳಗೆ ಹೋಗಿ ಬಾಗಿಲು ಹಾಕಿದ್ದಾನೆ. ಆದರೂ ಬಿಡದ ದುಷ್ಕರ್ಮಿಗಳು ಗ್ಲಾಸ್ ಗಳನ್ನು ಒಡೆದು ಚೇಂಬರ್ ಒಳ ನುಗ್ಗಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಬ್ಯಾಂಕ್ ಹೊರಗೆ ದ್ವಿಚಕ್ರ ವಾಹನದಲ್ಲಿ 5-6 ಮಂದಿ ಕಾಯುತ್ತಾ ನಿಂತಿದ್ದು, ಈ ವಾಹನಗಳ ಮೂಲಕ ಆರೋಪಿಗಳು ಪರಾರಿಯಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ನಾಗಾ ಹಾಗೂ ಆತನ ಸಹಚರರಾದ ಗೋಪಿ, ಶರವಣ, ಹೈದರ್ ಮತ್ತು ಇತರರಿಗಾಗಿ ಈಗಾಗಲೇ ಹುಡುಕಾಟ ಆರಂಭವಾಗಿದೆ. ಆರೋಪಿಗಳ ಪತ್ತೆಗೆ ನೆರೆ ರಾಜ್ಯಗಳಿಗೂ ಪೊಲೀಸರ ತಂಡ ತೆರಳಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಪ್ರಕರಣ ಸಂಬಂಧ ಪೊಲೀಸರು ಬಬ್ಲಿ ಪತ್ನಿ ಜನ್ನೀಫರ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com