100 ಕೋಟಿ ರೂ. ಗೂ ಹೆಚ್ಚು ಅನುದಾನಿತ ಯೋಜನೆಗಳ ಮೌಲ್ಯಮಾಪನಕ್ಕೆ ಸಿಎಂ ಸೂಚನೆ
ರೂ.100 ಕೋಟಿಗೂ ಹೆಚ್ಚು ಅನುದಾನ ಇರುವ ಕಾರ್ಯಕ್ರಮಗಳ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚನೆ ನೀಡಿದ್ದು, ಇದರ ಜವಾಬ್ದಾರಿಯನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
Published: 21st July 2021 08:46 AM | Last Updated: 21st July 2021 02:17 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರೂ.100 ಕೋಟಿಗೂ ಹೆಚ್ಚು ಅನುದಾನ ಇರುವ ಕಾರ್ಯಕ್ರಮಗಳ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚನೆ ನೀಡಿದ್ದು, ಇದರ ಜವಾಬ್ದಾರಿಯನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದ 24 ಇಲಾಖೆಗಳ ಮೂಲಕ ಜಾರಿಯಾಗುತ್ತಿರುವ ಕೇಂದ್ರ ಕೇಂದ್ರದ ಪುರಸ್ಕೃತ 96 ಯೋಜನೆಗಳ ಪ್ರಗತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಪರಿಶೀಲಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಸಚಿವ ಎಸ್.ಸುರೇಶ್ಕುಮಾರ್ ಅವರು ಮಾತನಾಡಿ ಮಾಹಿತಿ ನೀಡಿದರು.
2020-21ನೇ ಸಾಲಿನಲ್ಲಿ ರೂ.18,001 ಕೋಟಿ, 2021-22ರ ಸಾಲಿನಲ್ಲಿ ರೂ.17,036 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಿದೆ. ಇತರ ಮೂಲಗಳ ಅನುದಾನ ಸೇರಿ, ಒಟ್ಟು ಅನುದಾನದ ಮೊತ್ತ 38,078 ಕೋಟಿ ಎಂದು ಮಾಹಿತಿ ನೀಡಿದರು.
ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಜಲಜೀವನ್ ಮಿಷನ್, ಮಧ್ಯಾಹ್ನದ ಬಿಸಿಯೂಟ, ಸಮಗ್ರ ಶಿಕ್ಷಣ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಜ್ಯ ವಿಪತ್ತು ನಿಧಿಗೆ ಸಹಾಯಧನ, ಪೂರಕ ಪೌಷ್ಟಿಕ ಕಾರ್ಯಕ್ರಮಗಳ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಇದೆ,
ಗ್ರಾಮ ಸಡಕ್ ಯೋಜನೆಯಲ್ಲಿ ಒಟ್ಟು 5611 ಕಿಮೀ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಈ ವರ್ಷ 25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕೊಡುವ ಗುರಿ ಇದೆ. ಒಟ್ಟು ರೂ. 646 ಕೋಟಿ ಮೊತ್ತವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ಬಿಡುಗಡೆ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ 1.20 ಲಕ್ಷ ಮನೆಗಳನ್ನು ಕೊಳಗೇರಿಗಳಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ರೂ. 100 ಕೋಟಿಗೂ ಹೆಚ್ಚು ಅನುದಾನ ಇರುವ ಕಾರ್ಯಕ್ರಮಗಳ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಬೇಕೆಂದು ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಸೂಚನೆ ನೀಡಿರುವ ಯಡಿಯೂರಪ್ಪ ಅವರು, ಕೇಂದ್ರವು ರಾಜ್ಯಕ್ಕೆ ಹಂಚಿಕೆ ಮಾಡಿರವ ಅನುದಾನವು ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಬೇಕು. ಅನುದಾನ ವೆಚ್ಚದ ಬಗ್ಗೆ ಮತ್ತು ಯೋಜನೆಗಳ ಅನುಷ್ಠಾನದ ಕುರಿತು ಕೇಂದ್ರ ಅಗತ್ಯ ದಾಖಲೆ ಸಲ್ಲಿಕೆಯನ್ನು ಇಲಾಖೆಗಳು ಖಾತ್ರಿಪಡಿಸಿಕೊಳ್ಳಬೇಕು. ಕೇಂದ್ರದ ಪ್ರತಿ ಪೈಸೆಯು ನಾಡಿನ ಜನರಿಗೆ ಸದ್ಬಳಕೆಯಾಬೇಕು. ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೆ ಮತ್ತು ಕೇಂದ್ರದ ಸಚಿವರು, ಪ್ರಧಾನಿಗಳ ಗಮನಕ್ಕೆ ತರಬೇಕಾದ ಅಂಶಗಳಿದ್ದರೆ ಕೂಡಲೇ ನನ್ನ ಗಮನಕ್ಕೆ ತರಬೇಕೆಂದು ಹೇಳಿದ್ದಾರೆಂದು ತಿಳಿದುಬಂದಿದೆ.