ಉಡುಪಿ ಎನ್ ಆರ್ ಐ ಮಹಿಳೆ ಹತ್ಯೆ ಪ್ರಕರಣ: ಆರು ತಿಂಗಳ ಹಿಂದೆಯೇ ದುಬೈನಲ್ಲಿ ಕೊಲೆಗೆ ಸ್ಕೆಚ್ ರೂಪಿಸಿದ್ದ ಪತಿ!

ಬ್ರಹ್ಮಾವರ ಸಮೀಪದ ಉಪ್ಪಿನ ಕೋಟೆಯ ಫ್ಲ್ಯಾಟ್‌ನಲ್ಲಿ ನಿಗೂಢವಾಗಿ ಸಾವಿಗೀಡಾದ ವಿಶಾಲ ಗಾಣಿಗ (36) ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೊಂದು ಸುಪಾರಿ ಕಿಲ್ಲರ್‌ಗಳ ಕೃತ್ಯ ಎಂಬುದು ಕಂಡುಬಂದಿದೆ.
ವಿಶಾಲ ಗಾಣಿಗ
ವಿಶಾಲ ಗಾಣಿಗ

ಉಡುಪಿ: ಬ್ರಹ್ಮಾವರ ಸಮೀಪದ ಉಪ್ಪಿನ ಕೋಟೆಯ ಫ್ಲ್ಯಾಟ್‌ನಲ್ಲಿ ನಿಗೂಢವಾಗಿ ಸಾವಿಗೀಡಾದ ವಿಶಾಲ ಗಾಣಿಗ (36) ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೊಂದು ಸುಪಾರಿ ಕಿಲ್ಲರ್‌ಗಳ ಕೃತ್ಯ ಎಂಬುದು ಕಂಡುಬಂದಿದೆ.

ಪತ್ನಿಯನ್ನು ಕೊಲೆ ಮಾಡಲು ಪತಿಯೇ 2 ಲಕ್ಷ ರೂ. ಸುಪಾರಿ ಹಂತಕರಿಗೆ ನೀಡಿದ್ದು, ಕೊಲೆ ಕೃತ್ಯ ನಡೆಸಿದ್ದ. ಪತಿ ರಾಮಕೃಷ್ಣ ಗಾಣಿಗ ಅವರು ಉತ್ತರ ಪ್ರದೇಶ ಮೂಲದ ಇಬ್ಬರು ಸುಪಾರಿ ಕಿಲ್ಲರ್‌ಗಳಿಗೆ ಸುಪಾರಿ ನೀಡಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಇಬ್ಬರು ಕೊಲೆ ಆರೋಪಿಗಳನ್ನು ಪತಿ ರಾಮಕೃಷ್ಣ ಗಾಣಿಗ ಮಾರ್ಚ್‌ನಲ್ಲೇ ತನ್ನ ಉಪ್ಪಿನ ಕೋಟೆಯ ಪ್ಲ್ಯಾಟ್‌ಗೆ ಕರೆಯಿಸಿಕೊಂಡಿದ್ದು, ತನ್ನ ಗೆಳೆಯರೆಂದು ಪತ್ನಿ ವಿಶಾಲ ಗಾಣಿಗರಿಗೆ ಪರಿಚಯಿಸಿದ್ದ ಎನ್ನಲಾಗಿದೆ. ಹಂತಕರ ಜತೆ ಪತಿ ರಾಮಕೃಷ್ಣ ನಿರಂತರ ಮೊಬೈಲ್‌ ಸಂಪರ್ಕ ಇರಿಸಿಕೊಂಡಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ವಿಶಾಲ ಅವರು ಕೊಲೆಯಾದ ಬಳಿಕ ಆಕೆಯ ಪತಿ ರಾಮಕೃಷ್ಣ ಗಾಣಿಗ ಎಂಬವರನ್ನು ಎರಡು, ಮೂರು ಬಾರಿ ವಿಚಾರಣೆಗೆ ಒಳಪಡಿಸಲಾಗಿತ್ತು. ಸೋಮವಾರದ ತೀವ್ರ ವಿಚಾರಣೆ ವೇಳೆ ಇದೊಂದು ಸುಪಾರಿ ಕಿಲ್ಲರ್‌ಗಳ ವ್ಯವಸ್ಥಿತ ಕೃತ್ಯವೆಂದು ಪೊಲೀಸರಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ  ಪತಿ ರಾಮಕೃಷ್ಣನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಪತ್ನಿ ವಿಶಾಲ ಗಾಣಿಗ ಸಾಯುವ ಮುನ್ನ ವಿದೇಶದಲ್ಲಿದ್ದ ಪತಿ ರಾಮಕೃಷ್ಣ ಗಾಣಿಗ ಅವರು ಪತ್ನಿ ಸತ್ತ ವಿಷಯ ತಿಳಿದು ಊರಿಗೆ ಬಂದಿದ್ದರು. ಬಳಿಕ ಆತನ ಮನೆಯಲ್ಲೇ ಪತ್ನಿಯ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆಯೂ ಮಾಡಲಾಗಿತ್ತು. ಪತ್ನಿಯ ಅಂತ್ಯಸಂಸ್ಕಾರ, ಬಳಿಕ ನಡೆಯುವ ಕ್ರಿಯೆಯಲ್ಲಿಯೂ ಪತಿ ಪಾಲ್ಗೊಂಡಿದ್ದರು.

ವಿಶಾಲ ಗಾಣಿಗ ಅವರನ್ನು ಇಬ್ಬರು ಸುಪಾರಿ ಕ್ಲಿಲರ್‌ಗಳು ಕೊಲೆ ಮಾಡಿದ್ದರು ಎಂಬುದಾಗಿ ತನಿಖೆ ವೇಳೆ ತಿಳಿದುಬಂದಿದ್ದು, ಒಬ್ಬ ಆರೋಪಿಯನ್ನು ಪೊಲೀಸರ ಒಂದು ತಂಡ ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಸ್ವಾಮಿನಾಥನ್ ನಿಶದ್ ಎಂಬುವನನ್ನು ಬಂಧಿಸಿದ್ದಾರೆ. ಇನ್ನೊಬ್ಬ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಯುತ್ತಿದೆ

ವಿದೇಶದಲ್ಲಿದ್ದ ವಿಶಾಲ ಗಾಣಿಗ ಜು.2ರಂದು ತನ್ನ ಪುತ್ರಿಯೊಂದಿಗೆ ಊರಿಗೆ ಬಂದಿದ್ದು, ಉಪ್ಪಿನ ಕೋಟೆಯ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಜುಲೈ 7 ರಂದು ರಾಮಕೃಷ್ಣರ ಆಸ್ತಿಗೆಸಂಬಂಧಿಸಿದ ಪಾಲುಪಟ್ಟಿ ನಡೆದಿದ್ದು, ಜುಲೈ 12ರಂದು ವಿಶಾಲ ಗಾಣಿಗ ತನ್ನ ತಂದೆ, ತಾಯಿ ಹಾಗೂ ಪುತ್ರನೊಂದಿಗೆ ಆಟೋ ರಿಕ್ಷಾದಲ್ಲಿ ತಾಯಿ ಮನೆ ಗುಜ್ಜಾಡಿಗೆ ಹೋಗಿದ್ದರು.

ಇದಾದ ಬಳಿಕ ವಿಶಾಲ ಗಾಣಿಗ ಆಟೋರಿಕ್ಷಾದಲ್ಲಿ ಮತ್ತೆ ಫ್ಲ್ಯಾಟ್‌ಗೆ ಬಂದಿದ್ದು, ಈ ವೇಳೆ ಸುಪಾರಿ ಕಿಲ್ಲರ್‌ಗಳು ವಿಶಾಲ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇದು ವ್ಯವಸ್ಥಿತ ಕೊಲೆಯಾಗಬಾರದೆಂಬ ಉದ್ದೇಶಕ್ಕೆ ಆಕೆಯ ಮೈ ಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲ ಪ್ರಕರಣ ದಾಖಲಾಗಿತ್ತು. ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಕೊಲೆ ಪ್ರಕರಣ ಬೇಧಿಸಲು ಭಾಗಿಯಾಗಿದ್ದ ಪೊಲೀಸ್ ತಂಡಕ್ಕೆ 50,000 ರೂ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com