ರಾಮನಗರ: ಏಕಾಏಕಿ ಬ್ರೇಕ್ ಹಾಕಿದ ಚಾಲಕ, ಬಸ್ ಮುಂದಿನ ಗಾಜಿನಿಂದ ಹೊರಬಿದ್ದು ಬಾಲಕಿ ದಾರುಣ ಸಾವು

ಚಾಲಕನೊಬ್ಬನ ನಿರ್ಲಕ್ಷ್ಯ ಚಾಲನೆಯಿಂದಾಗಿ 6 ವರ್ಷದ ಬಾಲಕಿ ಬಸ್ ಹರಿದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿ‌ನ ಹೊನ್ನಾಪುರದ ಬಳಿ ನಡೆದಿದೆ.
ಬಾಲಕಿ ಜೀವಿಕಾ
ಬಾಲಕಿ ಜೀವಿಕಾ

ಬೆಂಗಳೂರು: ಚಾಲಕನೊಬ್ಬನ ನಿರ್ಲಕ್ಷ್ಯ ಚಾಲನೆಯಿಂದಾಗಿ 6 ವರ್ಷದ ಬಾಲಕಿ ಬಸ್ ಹರಿದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿ‌ನ ಹೊನ್ನಾಪುರದ ಬಳಿ ನಡೆದಿದೆ.

ಜೀವಿಕಾ (6) ಮೃತಪಟ್ಟ ಬಾಲಕಿಯಾಗಿದ್ದಾಳೆ. ಕುಮಾರ್ ಹಾಗೂ ಜ್ಯೋತಿ ಎಂಬ ದಂಪತಿಯ ಏಕೈಕ ಪುತ್ರಿಯಾಗಿದ್ದ ಜೀವಿಕಾ ಬೆಂಗಳೂರಿನಿಂದ ತಮ್ಮ ಅಜ್ಜಿ ಗೌರಮ್ಮ ಹಾಗೂ ಚಿಕ್ಕಪ್ಪ ಯೋಗೇಶ್ ಎಂಬುವವರ ಜೊತೆ ಮಂಡ್ಯ ಜಿಲ್ಲೆ ಮದ್ದೂರಿಗೆ ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಳು. 

ಬುಧವಾರ ಬೆಳಿಗ್ಗೆ ಸುಂಕದಕಟ್ಟೆಯಲ್ಲಿ ಖಾಸಗಿ ಬಸ್ ಹತ್ತಿದ್ದರು. ಬಾಲಕಿ ಬಸ್ ಇಂಜಿನ್ ಇದ್ದ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದಳು. ಆರಂಭದಿಂದಲೂ ಚಾಲಕ ನಿರ್ಲಕ್ಷ್ಯದಿಂದಲೇ ಚಾಲನೆ ಮಾಡುತ್ತಿದ್ದನೆಂದು ಹೇಳಲಾಗುತ್ತಿದೆ. ಬೆಳಿಗ್ಗೆ 11.30 ರ ಸುಮಾರಿಗೆ ಬೆಂಗಳೂರು-ಮಾಗಡಿ ರಸ್ತೆಯ ಕಸಬಾ ಹೋಬಳಿಯ ಹೊನ್ನಾಪುರ ಗ್ರಾಮದ ಬಳಿ ಬಸ್ ತೆರಳುತ್ತಿದ್ದಂತೆಯೇ ಚಾಲಕ ಇದ್ದಕ್ಕಿದ್ದಂತೆಯ ಬ್ರೇಸ್ ಹಾಕಿದ್ದಾರೆ. ಪರಿಣಾಮ ಮುಂದೆ ಕುಳಿತಿದ್ದ ಬಾಲಕಿ ಬಸ್ ಮುಂದಿನ ಗಾಜಿನಿಂದ ಹೊರಬಿದ್ದು, ಬಸ್ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಬಸ್ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. 

ಇದೀಗ ಬಾಲಕಿಯ ಚಿಕ್ಕಪ್ಪ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಸ್ ಚಾಲಕನನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ಘಟನೆ ಬಳಿಕ ಸಾರಿಗೆ ಬಸ್ ಗಳಲ್ಲೂ ಸೀಟ್ ಬೆಲ್ಟ್ ಅಳವಡಿಸಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಸೀಟ್ ಬೆಲ್ಟ್ ಧರಿಸುವುದು ಸೂಕ್ತ ರೀತಿಯ ಪರಿಹಾರವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

10 ವರ್ಷದ ಕೆಳಗಿನ ಮಕ್ಕಳಿಗೆ ಸೀಟ್ ಬೆಲ್ಟ್ ಧರಿಸುವಂತೆ ಮಾಡಬೇಕು. ಸೀಟ್ ಬೆಲ್ಟ್, ಸೆನ್ಸಾರ್ ಗಳ ಅವರ ಅಳವಡಿಕೆಯಿಂದ ಜೀವಗಳ ರಕ್ಷಿಸಬಹುದು ಎಂದು ಸಂಚಾರ ತಜ್ಞ ಎಂಎನ್.ಶ್ರೀಹರಿಯವರು ಹೇಳಿದ್ದಾರೆ. 

ಮಕ್ಕಳನ್ನು ಬಸ್ ನಲ್ಲಿ ಕರೆದುಕೊಂಡು ಹೋಗುವಾಗ ಪೋಷಕರು ಹಾಗೂ ಸಂಬಂಧಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ದೊಡ್ಡವರ ಮಧ್ಯೆ ಮಕ್ಕಳು ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಯಾವುದೇ ಅಪಘಾತಗಳು ಎದುರಾದರೂ ಮಕ್ಕಳನ್ನು ರಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com