ಕರ್ನಾಟಕ-ಮಹಾರಾಷ್ಟ್ರ-ಗೋವಾ ಗಡಿಗಳಲ್ಲಿ ಮಳೆಯಿಂದ ಬೃಹತ್ ಪ್ರಮಾಣದ ಹಾನಿ; ರಸ್ತೆ, ರೈಲ್ವೆ ಸೇವೆ ಅಸ್ತವ್ಯಸ್ತ

ನಿರಂತರ, ಧಾರಾಕಾರ ಮಳೆಯ ಪರಿಣಾಮ ಬೆಳಗಾವಿ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಗಳಲ್ಲಿ ಬೃಹತ್ ಪ್ರಮಾಣದ ಹಾನಿ ಸಂಭವಿಸಿದೆ.
ಬೆಳಗಾವಿಯಲ್ಲಿರುವ ಎನ್ ಹೆಚ್-4 ರಸ್ತೆಯೊಂದು ಜಲಾವೃತಗೊಂಡಿರುವುದು
ಬೆಳಗಾವಿಯಲ್ಲಿರುವ ಎನ್ ಹೆಚ್-4 ರಸ್ತೆಯೊಂದು ಜಲಾವೃತಗೊಂಡಿರುವುದು

ಬೆಳಗಾವಿ: ನಿರಂತರ, ಧಾರಾಕಾರ ಮಳೆಯ ಪರಿಣಾಮ ಬೆಳಗಾವಿ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಗಳಲ್ಲಿ ಬೃಹತ್ ಪ್ರಮಾಣದ ಹಾನಿ ಸಂಭವಿಸಿದ್ದು, ಎನ್ ಹೆಚ್-4 ಹಾಗೂ ಎನ್ ಹೆಚ್-4ಎ ರಸ್ತೆಗಳೂ ಸೇರಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸಂಚಾರಕ್ಕೆ ಅಡ್ಡಿ  ಉಂಟಾಗಿದೆ. 

ಪುಣೆ ಹಾಗೂ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಎನ್ ಹೆಚ್-4 ನಲ್ಲಿ ಕರ್ನಾಟಕ-ಮಹಾರಾಷ್ಟ್ರದ ಗಡಿ ಪ್ರದೇಶದ ನಿಪ್ಪಾಣಿ ಹಾಗೂ ಬೆಳಗಾವಿ ಬಳಿಯ ಸಂಕೇಶ್ವರ, ವಂತ್ಮುರಿಗಳಲ್ಲಿ ರಸ್ತೆ ಕಲಾವೃತಗೊಂಡಿದ್ದ ಕಾರಣ ಶುಕ್ರವಾರ ಬೆಳಿಗ್ಗೆಯಿಂದಲೂ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. 

ಸಂಕೇಶ್ವರದ ಬಳಿ ಇರುವ ಎನ್ ಹೆಚ್-4 ರಸ್ತೆ ಕೆರೆಯಂತಾಗಿದ್ದು ಎರಡೂ ಪಾರ್ಶ್ವಗಳಲ್ಲಿ ವಾಹನಗಳು ಸಿಲುಕಿಕೊಂಡಿದ್ದವು. ಈ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರೆದಿರುವ ಪರಿಣಾಮ ಈ ಭಾಗದಲ್ಲಿ ಸಂಚರಿಸುವ ಮಂದಿ ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. 

ಕೃಷ್ಣ ನದಿ ಹಾಗೂ ಅದರ ಉಪನದಿಗಳಿರುವ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜನತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಗಡಿ ಭಾಗದಲ್ಲಿ ಕೃಷ್ಣಾ ನದಿಯ ಮಿತಿಮೀರಿದ ಹರಿವಿನ ಪರಿಣಾಮವಾಗಿ 8 ಸೇತುವೆಗಳು  ಮುಳುಗಿದ್ದು, ಅಧಿಕಾರಿಗಳು ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿದ್ದಾರೆ. 

ಗೋವಾ ಮೂಲಕ ಬೆಳಗಾವಿಗೆ ಹಾಗೂ ಕ್ಯಾಸಲ್‌ರಾಕ್ ಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗಗಳೂ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದು, ಚೋರ್ಲಾ ಹಾಗೂ ಎನ್ ಹೆಚ್-4ಎ ಮೂಲಕ ಬೆಳಗಾವಿಯಿಂದ ಗೋವಾಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳೂ ಸಹ ಹಾನಿಗೊಳಗಾಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. 

ಬೆಳಗಾವಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ನೀರನ್ನು ಹೊರಹಾಕುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ ಬೆಳಗಾವಿ ಬಳಿಯ ವಾಘ್ವಾಡೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯೋರ್ವ ಈಜಿ ಗ್ರಾಮಸ್ಥರ ನೆರವಿನಿಂದ ಹೊರ ಬಂದಿದ್ದಾರೆ. 

ಮತ್ತೊಂದು ಘಟಾನೆಯಲ್ಲಿ ಬೆಳಗಾವಿ ಬಳಿಯ ಲೋಂಡದಲ್ಲಿರುವ ಪಾಂಡರಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಖಾನಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪವಾಡ ಸದೃಶರೀತಿಯಲ್ಲಿ ರಕ್ಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com