ವಸತಿ ರಹಿತರಿಗೆ ರಾತ್ರಿ ತಂಗುದಾಣ ನಿರ್ಮಿಸುವಂತೆ ಸರ್ಕಾರಕ್ಕೆ 'ಹೈ' ಸೂಚನೆ

ರಾಜ್ಯದೆಲ್ಲೆಡೆ ವಸತಿ ರಹಿತರ ಸಂಖ್ಯೆ ಹೆಚ್ಚಾಗಿದ್ದು, ರಾತ್ರಿ ವೇಳೆ ಚಳಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ತಪ್ಪಿಸಲು ಸರ್ಕಾರ 3 ತಿಂಗಳಲ್ಲಿ 120 ರಾತ್ರಿ ತಂಗುದಾಣ (ನೈಟ್ ಶೆಲ್ಟರ್) ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದೆಲ್ಲೆಡೆ ವಸತಿ ರಹಿತರ ಸಂಖ್ಯೆ ಹೆಚ್ಚಾಗಿದ್ದು, ರಾತ್ರಿ ವೇಳೆ ಚಳಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ತಪ್ಪಿಸಲು ಸರ್ಕಾರ 3 ತಿಂಗಳಲ್ಲಿ 120 ರಾತ್ರಿ ತಂಗುದಾಣ (ನೈಟ್ ಶೆಲ್ಟರ್) ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ ಅಡಿಯಲ್ಲಿ ನಗರದ ವಸತಿ ರಹಿತರಿಗೆ ಸೂರು ಕಲ್ಪಿಸುವಂತೆ ಕೋರಿ ಪಿಯುಸಿಎಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿತು.

ಈ ವೇಳೆ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ ಯೋಜನಾಧಿಕಾರಿ ಸಲ್ಲಿಸಿದ್ದ ಪ್ರಮಾಣಪತ್ರವನ್ನು ನ್ಯಾಯಾಲಯ ಪರಿಶೀಲಿಸಿದ ಪೀಠ,  ಸರ್ಕಾರ 2021ರ ಫೆಬ್ರವರಿಯಲ್ಲಿ ನಡೆಸಿರುವ ಸಮೀಕ್ಷೆಯಂತೆ 1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲಿ ವಸತಿರಹಿತರಿಗೆ 166 ರಾತ್ರಿ ತಂಗುದಾಣಗಳ ಅಗತ್ಯವಿದೆ ಎಂದಿದೆ. ಅದರಂತೆ ಸರ್ಕಾರ ಒಟ್ಟು 120 ನೈಟ್ ಶೆಲ್ಟರ್ಸ್ ನಿರ್ಮಾಣಕ್ಕೆ ಕೂಡಲೇ ಅನುಮೋದನೆ ನೀಡಬೇಕು. ಈ ಶೆಲ್ಟರ್ ಗಳನ್ನು ಆದ್ಯತೆ ಮೇರೆಗೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸಬೇಕು ಎಂದು ನಿರ್ದೇಶಿಸಿತು.

ವರದಿಯಂತೆ ಬೆಂಗಳೂರು ನಗರಕ್ಕೆ 84 ನೈಟ್ ಶೆಲ್ಟರ್ಸ್ ಅಗತ್ಯವಿದೆ. ಆದರೆ 10 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಮಹಾನಗರಕ್ಕೆ ತಲಾ 9 ಶೆಲ್ಟರ್ಸ್ ಅಗತ್ಯವಿದ್ದು, ಅಲ್ಲಿ ಸದ್ಯ ಒಂದೊಂದೇ ತಂಗುದಾಣಗಳಿವೆ. ಆದ್ದರಿಂದ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 3 ತಿಂಗಳಲ್ಲಿ 42 ರಾತ್ರಿ ತಂಗುದಾಣ ನಿರ್ಮಿಸಬೇಕು ಮತ್ತು ಇನ್ನುಳಿದ 42ನ್ನು ಆರು ತಿಂಗಳೊಳಗೆ ಪ್ರಾರಂಭಿಸಬೇಕು. ಉಳಿದ ನಗರ ಪ್ರದೇಶಗಳಲ್ಲಿ ಮೂರು ತಿಂಗಳೊಳಗೆ ರಾತ್ರಿ ತಂಗುದಾಣಗಳನ್ನು ಪ್ರಾರಂಭಿಸಲು ಎಲ್ಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಆದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪ್ರಸ್ತತ ಕಾರ್ಯ ನಿರ್ವಹಿಸುತ್ತಿರುವ ರಾತ್ರಿ ತಂಗುದಾಣಗಳಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದೆ ಎಂದರು. 

ಮಾಹಿತಿ ಪರಿಗಣಿಸಿದ ಪೀಠ, ತಂಗುದಾಣಗಳ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿತು. ಅಲ್ಲದೇ, ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಸ್ಥಿತಿಗತಿ ಪರಿಶೀಲಿಸಲು ಜಿಲ್ಲಾ ಪ್ರಾಧಿಕಾರಗಳಿಗೆ ಸೂಚನೆ ನೀಡಬೇಕು. ಮೂಲಸೌಕರ್ಯದ ಕುರಿತು ಪರಿಶೀಲಿಸಿ ಆಗಸ್ಟ್ 24ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com