ವರುಣನ ಆರ್ಭಟಕ್ಕೆ ತತ್ತರಿಸಿದ ಕರ್ನಾಟಕ: ಮಳೆ ಅನಾಹುತಕ್ಕೆ 9 ಮಂದಿ ಬಲಿ, ಅಪಾರ ಪ್ರಮಾಣದ ಬೆಳೆ ಹಾನಿ, ಬೆಳಗಾವಿಗಿಂದು ಸಿಎಂ ಭೇಟಿ

ರಾಜ್ಯದಾದ್ಯಂತ ಮಳೆ ಇಳಿಮುಖವಾಗಿದ್ದರೂ, ಉತ್ತರ ಕರ್ನಾಟಕ, ಉತ್ತರ ಕನ್ನಡ ಹಾಗೂ ಮಲೆನಾಡಿನ ಕೆಲವೆಡೆ ಪ್ರವಾಹದ ಸ್ಥಿತಿ ಮುಂದುವರೆದಿದೆ. ಮಳೆ, ಪ್ರವಾಹದಬ್ಬರಕ್ಕೆ ಸುಮಾರು 500ಕ್ಕೂ ಹೆಚ್ಚು ಗ್ರಾಮಗಳು ಬಾಧಿತವಾಗಿದ್ದು, ಮತ್ತೆ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ...
ಬೆಳಗಾವಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್'ಡಿಆರ್'ಎಫ್ ಪಡೆ
ಬೆಳಗಾವಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್'ಡಿಆರ್'ಎಫ್ ಪಡೆ

ಬೆಂಗಳೂರು: ರಾಜ್ಯದಾದ್ಯಂತ ಮಳೆ ಇಳಿಮುಖವಾಗಿದ್ದರೂ, ಉತ್ತರ ಕರ್ನಾಟಕ, ಉತ್ತರ ಕನ್ನಡ ಹಾಗೂ ಮಲೆನಾಡಿನ ಕೆಲವೆಡೆ ಪ್ರವಾಹದ ಸ್ಥಿತಿ ಮುಂದುವರೆದಿದೆ. ಮಳೆ, ಪ್ರವಾಹದಬ್ಬರಕ್ಕೆ ಸುಮಾರು 500ಕ್ಕೂ ಹೆಚ್ಚು ಗ್ರಾಮಗಳು ಬಾಧಿತವಾಗಿದ್ದು, ಮತ್ತೆ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ಮಳೆ ಸಂಬಂಧಿ ಅನಾಹುತಕ್ಕೆ ರಾಜ್ಯದಲ್ಲಿ ಈ ವರೆಗೂ 9 ಮಂದಿ ಬಲಿಯಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಅಲ್ಲದೆ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ರಾಜ್ಯದ ಇತರೆಡೆ ಹೋಲಿಸಿದರೆ ಬೆಳಗಾವಿ ಮತ್ತು ಹಾವೇರಿಯಲ್ಲಿ ಪ್ರವಾಹದಾತಂಕ ಹೆಚ್ಚಿದ್ದು, ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಉತ್ತರ ಕನ್ನಡ ಹೊರತುಪಡಿಸಿ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ನದಿ ನೀರಿನಮಟ್ಟ ಇಳಿಮುಖವಾಗಿದೆ. ಚಿಕ್ಕಮಗಳೂರಿನಲ್ಲಿ ಹೇಮಾವತಿ, ತುಂಗಾ, ಭದ್ರಾ ನೀರಿನ ಮಟ್ಟ ಕಡಿಮೆಯಾಗಿದೆ. 

ರಾಜ್ಯದಲ್ಲಿ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತು ಧಾರವಾಡ ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

ಭಾರೀ ಮಳೆಗೆ ರಾಜ್ಯದಲ್ಲಿ 16 ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಉತ್ತರ ಕನ್ನಡದಲ್ಲಿ ಅತೀ ಹೆಚ್ಚು ಭೂಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡಲು 15ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಅಂಕಿ ಅಂಶಗಳ ಪ್ರಕಾರ, ಕರಾವಳಿ ಮತ್ತು ಮಲೆನಾಡಿನಲ್ಲಿ ಕಳೆದ 7 ದಿನಗಳಲ್ಲಿ 500 ಮಿ.ಮೀ ಮತ್ತು 1,238 ಮಿ.ಮೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ 40,000 ಜನರು ಬಾಧಿತರಾಗಿದ್ದರೆ, 283 ಗ್ರಾಮಗಳು ಮತ್ತು 45 ತಾಲ್ಲೂಕುಗಳಿಗೆ ತೀವ್ರ ಹಾನಿಯಾಗಿದೆ. ರಸ್ತೆಗಳಲ್ಲದೆ, ಕೃಷಿ ಭೂಮಿ, ವಿದ್ಯುತ್ ಕಂಬಗಳು, ಸೇತುವೆಗಳು, ಶಾಲಾ ಕಟ್ಟಡಗಳು ಮತ್ತು ಇತರ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ.

ಬೆಳಗಾವಿಗಿಂದು ಸಿಎಂ ಭೇಟಿ
ಬೆಳಗಾವಿಯಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಬೆಳಗಾವಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. 

ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳು ಸೇರಿದಂತೆ ಅನುಹುತ ಸಂಭವಿಸಿದ ಪ್ರದೇಶಗಳಿಗೆ ಮುಖ್ಯಮಂತ್ರಿಗಳು ರಸ್ತೆ ಮಾರ್ಗವಾಗಿಯೇ ಭೇಟಿ ನೀಡಲಿದ್ದಾರೆ. ಅವರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಕಂದಾಯ ಸಚಿವ ಆರ್.ಅಶೋಕ ಅವರು ಸಾಥ್ ನೀಡಲಿದ್ದಾರೆ. 

ಭಾನುವಾರ ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಬೆಳಿಗ್ಗೆ 10.15ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳುವ ಅವರು, ಅಲ್ಲಿಂದ ಬೆಳಿಗ್ಗೆ 11ಕ್ಕೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಠ ಗಲ್ಲಿ, ಕುಂಬಾರ ಓಣಿ, ನದಿ ಗಲ್ಲಿಗಳಲ್ಲಿ ಮುಳುಗಡೆ ಪ್ರದೇಶಗಳನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ಶಂಕರಲಿಂಗ ಕಾರ್ಯಾಲಯದಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿರುವ ಜನರ ಆರೋಗ್ಯ ಮತ್ತು ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಿದ್ದಾರೆ. 

11.15ಕ್ಕೆ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಹತ್ತಿರದಲ್ಲಿ ಮುಳುಗಡೆಯಾದ ರಾಷ್ಟ್ರೀಯ ಹೆದ್ದಾರಿ 4 ನ್ನು ವೀಕ್ಷಣೆ ಮಾಡಲಿದ್ದಾರೆ. ಸರ್ಕಾರಿ  ಮರಾಠಿ ಗಂಡುಮಕ್ಕಳ ಶಾಲೆಯಲ್ಲಿನ ಕಾಳಜಿ ಕೇಂದ್ರವನ್ನು ವೀಕ್ಷಿಸುವರು. ಬಳಿಕ ಮಧ್ಯಾಹ್ನ 12.20ಕ್ಕೆ ನಿಪ್ಪಾಣಿ ತಾಲೂಕಿನ ಕೋಡ್ನಿ ಗ್ರಾಮದಲ್ಲಿನ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸುವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com