2-3 ತಿಂಗಳಲ್ಲಿ ರಾಜ್ಯದ 6 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ: ಆರೋಗ್ಯ ಸಚಿವ ಕೆ ಸುಧಾಕರ್

ರಾಜ್ಯದಲ್ಲಿ ಉಚಿತವಾಗಿ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಸುಸೂತ್ರವಾಗಿ ಸಾಗುತ್ತಿದ್ದು ಇನ್ನೆರಡು ದಿನದಲ್ಲಿ 3 ಕೋಟಿ ತಲುಪುವ ಗುರಿ ಹೊಂದಲಾಗಿದೆ.
ಸಚಿವ ಕೆ ಸುಧಾಕರ್
ಸಚಿವ ಕೆ ಸುಧಾಕರ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉಚಿತವಾಗಿ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಸುಸೂತ್ರವಾಗಿ ಸಾಗುತ್ತಿದ್ದು ಇನ್ನೆರಡು ದಿನದಲ್ಲಿ 3 ಕೋಟಿ ತಲುಪುವ ಗುರಿ ಹೊಂದಲಾಗಿದೆ. ಜೊತೆಗೆ ಇನ್ನೆರಡು ಮೂರು ತಿಂಗಳಲ್ಲಿ ಸುಮಾರು 5ರಿಂದ 6 ಕೋಟಿ ಜನರಿಗೆ ಲಸಿಕೆ ಕೊಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ  ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಭಾನುವಾರ ಎಂಪಿಎಲ್ ಕಂಪನಿಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಸಿಕಾಕರಣ ವೇಗ ಪಡೆಯಲು ರಾಜ್ಯದಲ್ಲಿನ ಸ್ವಯಂ ಸಂಸ್ಥೆಗಳು, ಮುಂದೆ ಬಂದು ಕೋವಿಡ್‌ ಲಸಿಕೆಯನ್ನು ಖರೀದಿಸಿ ಜನರಿಗೆ ಉಚಿತವಾಗಿ ನೀಡುವ ಪ್ರಕ್ರಿಯೆ ಹೆಚ್ಚಾಗಬೇಕು ಎಂದು ಹೇಳಿದ್ದಾರೆ.  

'ದೇಶದಲ್ಲಿ ಕೆಲವು ಪಕ್ಷಗಳು ಕೋವಿಡ್ ಲಸಿಕೆಗಳ ಬಗ್ಗೆ ಭಯವನ್ನು ಹರಡುತ್ತಿವೆ, ಅದಕ್ಕಾಗಿಯೇ ಆರಂಭದಲ್ಲಿ ಕೆಲವರು ಲಸಿಕೆ ಪಡೆಯಲು ಹಿಂದೆ ಬಿದ್ದರು. ಲಸಿಕೆ ತೆಗೆದುಕೊಳ್ಳುವುದರಿಂದ ಜನರು ಕೋವಿಡ್-19 ಅನ್ನು ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತಾರೆ ಮತ್ತು ಜನರು ಇದನ್ನು  ತಿಳಿದಿರುವುದರಿಂದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಲಸಿಕೆ ಪಡೆಯುತ್ತಿದ್ದಾರೆ.

'ಶೇ.25 ರಷ್ಟು ಲಸಿಕೆಗಳು ಖಾಸಗಿ ವಲಯಕ್ಕೆ ಮೀಸಲಿರಿಸಲಾಗಿದ್ದು, ಅವರು ಮುಂದೆ ಬಂದು ಅದನ್ನು ಜನರಿಗೆ ಉಚಿತವಾಗಿ ಒದಗಿಸಬೇಕು. ನಾವು ಚಿಕಿತ್ಸೆ, ಆಂಬ್ಯುಲೆನ್ಸ್ ಮತ್ತು ಕೋವಿಡ್ ಪರೀಕ್ಷೆಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಎಲ್ಲರೂ ಕೋವಿಡ್-19 ಸೂಕ್ತ ನಡವಳಿಕೆಯನ್ನು ಅನುಸರಿಸಿದರೆ ಮೂರನೇ  ಅಲೆ ಇರುವುದಿಲ್ಲ ಎಂದು ಸುಧಾಕರ್ ಹೇಳಿದರು. 

ಮಳೆ, ಪ್ರವಾಹ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ
ಇನ್ನು ರಾಜ್ಯದಲ್ಲಿ ಮಳೆ ಹೆಚ್ಚಾಗಿರುತ್ತಿರುವುದರಿಂದ, ಸಾಂಕ್ರಾಮಿಕ ರೋಗಗಳ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ಈಗಾಗಲೆ ಅದಕ್ಕೆ ಪೂರಕವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ನೆರೆಪೀಡಿತ ಐದಾರು ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ  ಮಾತನಾಡಿದ್ದು ಅಲ್ಲಿ ಕಾಳಜಿ ಕೇಂದ್ರಗಳಲ್ಲಿ ಶುದ್ಧ ನೀರು, ಅಗತ್ಯ ಔಷಧವನ್ನು ಪೂರೈಸಲಾಗಿದೆ. ಅದೇರೀತಿ ಮೊಬೈಲ್‌ ಯೂನಿಟ್ಸ್‌ ಹೆಲ್ತ್‌ ಕ್ಲಿನಿಕ್‌ಗಳನ್ನು ಕಳುಹಿಸಲಾಗಿದೆ ಎಂದರು.

ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಆ ವಿಚಾರವಾಗಿ ಮಾತನಾಡುವಷ್ಟು ನಾವು ದೊಡ್ಡವರಲ್ಲ. ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com