ಯಡಿಯೂರಪ್ಪ ಪದತ್ಯಾಗಕ್ಕೆ ಬೂಕನಕೆರೆಯಲ್ಲಿ ಆವರಿಸಿದ ಮೌನ; ಶಿಕಾರಿಪುರದಲ್ಲಿ ಭುಗಿಲೆದ್ದ ಆಕ್ರೋಶ, ಹಲವೆಡೆ ಪ್ರತಿಭಟನೆ!

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆಯಲ್ಲಿ ಬಿಎಸ್‌ವೈ ಹುಟ್ಟೂರಾದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ನೀರವ ಮೌನ ಆವರಿಸಿದೆ.
ಯಡಿಯೂರಪ್ಪ ಅವರ ಭಾಷಣವನ್ನು ಮೊಬೈಲ್ ನಲ್ಲಿ ವೀಕ್ಷಿಸುತ್ತಿರುವ ಬೂಕನಕೆರೆಯ ನಿವಾಸಿಗಳು
ಯಡಿಯೂರಪ್ಪ ಅವರ ಭಾಷಣವನ್ನು ಮೊಬೈಲ್ ನಲ್ಲಿ ವೀಕ್ಷಿಸುತ್ತಿರುವ ಬೂಕನಕೆರೆಯ ನಿವಾಸಿಗಳು

ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆಯಲ್ಲಿ ಬಿಎಸ್‌ವೈ ಹುಟ್ಟೂರಾದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ನೀರವ ಮೌನ ಆವರಿಸಿದೆ.

ಬಿ.ಎಸ್. ಯಡಿಯೂರಪ್ಪನವರು ಹುಟ್ಟು ಮತ್ತು ಬಾಲ್ಯವನ್ನು ಬೂಕನಕೆರೆಯಲ್ಲೇ ಕಳೆದಿದ್ದರು. ಆದರೆ ಉದ್ಯೋಗ ಅರಸಿ ಶಿವಮೊಗ್ಗದ ಶಿಕಾರಿಪುರಕ್ಕೆ ಆಗಮಿಸಿದ ಬಿಎಸ್‌ವೈ ಅಲ್ಲಿಂದಲೇ ರಾಜಕೀಯ ಜೀವನ ಆರಂಭಿಸಿದ್ದು ಈಗ ಇತಿಹಾಸ.

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬೂಕನಕೆರೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಭಿಮಾನಿಯೊಬ್ಬ ಕಣ್ಣೀರು ಹಾಕಿದ್ದಾರೆ. 

ಬೂಕನಕೆರೆಯ ಹೆಮ್ಮೆಯ ಮಗ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸುದ್ದಿ ಕೇಳಲು ಜನರು ಟಿವಿ ನೋಡಲು ಕುಳಿತುಕೊಂಡಿದ್ದರು. ಈ ಕಾರಣದಿಂದಾಗಿ ಬೂಕನಕೆರೆಯ ಬೀದಿಗಳು ನಿರ್ಜನವಾಗಿದ್ದವು.

ಗ್ರಾಮದ ನಿವಾಸಿ ರಾಮೇಗೌಡ ಎಂಬುವವರು ಮಾತನಾಡಿ, ಯಡಿಯೂರಪ್ಪ ಅವರು ಅಧಿಕಾರ ಪೂರ್ಣಗೊಳಿಸಲು ಬಿಜೆಪಿ ಹೈಕಮಾಂಡ್ ಬಿಡಬೇಕಿತ್ತು ಎಂದು ಹೇಳಿದ್ದಾರೆ.

ನಾಲ್ಕು ಬಾರಿ ರಾಜ್ಯ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಆದರೆ, ಒಮ್ಮೆಯೂ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಮತ್ತೊಬ್ಬ ಗ್ರಾಮಸ್ಥ ಬೇಸರ ವ್ಯಕ್ತಪಡಿಸಿದ್ದಾರೆ. 

ಪದತ್ಯಾಗ ಬೆನ್ನಲ್ಲೇ ಒಂದೆಡೆ ಯಡಿಯೂರಪ್ಪ ಅವರ ಹುಟ್ಟೂರಿನಲ್ಲಿ ಮೌನ ಆವರಿಸಿದ್ದರೆ, ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಆಕ್ರೋಶಗಳು ಭುಗಿಲೆದ್ದಿದ್ದವು. 

ಯಡಿಯೂರಪ್ಪ ಅವರ ರಾಜೀನಾಮೆಯಿಂದ ನೊಂದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವರ್ತಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವುದರೊಂದಿಗೆ ಶಿಕಾರಿಪುರದಲ್ಲಿ ಬಂದ್ ಆಚರಿಸಿದರು. 

ಶಿಕಾರಿಪುರದ ಯಡಿಯೂರಪ್ಪ ಅವರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಮೌನ ಮನೆ ಮಾಡಿತ್ತು. ಮನೆಯವರು ಬೆಂಗಳೂರಿಗೆ ತೆರಳಿದ್ದರಿಂದ ಕೇವಲ ಕೆಲಸಗಾರರು ಮಾತ್ರ ಇದ್ದರು. ಮತ್ತೊಂದೆಡೆ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com