ಹಾಳಾದ ರಸ್ತೆ: ಅಪಘಾತ ತಡೆಯಲು ರಸ್ತೆ ದುರಸ್ತಿ ಮಾಡಿದ ಆಶಾ ಕಾರ್ಯಕರ್ತೆ

ಮಳೆಯಿಂದಾಗಿ ಹಾಳಾದ ರಸ್ತೆಯಲ್ಲಿ ಅಪಘಾತಗಳನ್ನು ತಡೆಗಟ್ಟುವ ಮತ್ತು ಪ್ರಯಾಣಿಕರಿಗೆ ಸುಲಭ ಪ್ರಯಾಣವನ್ನು ಕಲ್ಪಿಸುವ ಉದ್ದೇಶದಿಂದ, ಆಶಾ ಕಾರ್ಯಕರ್ತೆ ಮತ್ತು ಆಕೆಯ ಪೋಷಕರು ಕಡಬಾ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಸ್ತೆ ದುರಸ್ತಿ ಮಾಡಿದ ಆಶಾ ಕಾರ್ಯಕರ್ತೆ
ರಸ್ತೆ ದುರಸ್ತಿ ಮಾಡಿದ ಆಶಾ ಕಾರ್ಯಕರ್ತೆ

ಮಂಗಳೂರು: ಮಳೆಯಿಂದಾಗಿ ಹಾಳಾದ ರಸ್ತೆಯಲ್ಲಿ ಅಪಘಾತಗಳನ್ನು ತಡೆಗಟ್ಟುವ ಮತ್ತು ಪ್ರಯಾಣಿಕರಿಗೆ ಸುಲಭ ಪ್ರಯಾಣವನ್ನು ಕಲ್ಪಿಸುವ ಉದ್ದೇಶದಿಂದ, ಆಶಾ ಕಾರ್ಯಕರ್ತೆ ಮತ್ತು ಆಕೆಯ ಪೋಷಕರು ಕಡಬಾ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಶಾ ಕಾರ್ಯಕರ್ತೆ ಅನಂತವತಿ, ಅವರ ತಾಯಿ ಶೇಷಮ್ಮ ಮತ್ತು ತಂದೆ ಸೋಮವಾರ ಮತ್ತು ಮಂಗಳವಾರ ಉಪ್ಪಿನಂಗಡಿ ಬಳಿಯ ಪೆರಿಯಡ್ಕಾದ ಕಿಂಡೋವಿಯಲ್ಲಿ ತಮ್ಮ ಮನೆಯ ಮುಂದೆ  ಸುಮಾರು 10 ಗುಂಡಿಗಳನ್ನು ಮುಚ್ಚಿದ್ದಾರೆ. ಇದು ಜನನಿಬಿಡ ರಸ್ತೆಯಾಗಿದ್ದು, ವಾಹನ ಚಾಲಕರು ಮತ್ತು ಪ್ರಯಾಣಿಕರು ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಹಲವಾರು ಮನವಿಗಳನ್ನು ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸಿಲ್ಲ. 

ಗುಂಡಿಗಳಿಂದ ಕೂಡಿದ ಈ ರಸ್ತೆ ಕಳೆದ ಮೂರು ವರ್ಷಗಳಿಂದ ಹಲವು ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದೆ. ಕಳೆದ ವರ್ಷ ಆಟೋ ರಿಕ್ಷಾ ಚಾಲಕ ಅದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದರು ಎಂದು ಅನಂತಾವತಿ ಹೇಳಿದ್ದಾರೆ.

'ನಾವು ಆತನನ್ನು ಆಸ್ಪತ್ರೆಗೆ ವರ್ಗಾಯಿಸಿದ್ದೆವು, ಆದರೆ ತೀವ್ರವಾಗಿ ಗಾಯಗೊಂಡ ಕಾರಣ ಅವರು ಮೃತಪಟ್ಟರು. ನಂತರ ಅದೇ ಸ್ಥಳದಲ್ಲಿ ಅನೇಕ ಪ್ರಯಾಣಿಕರು ಗಾಯಗೊಳ್ಳುವುದನ್ನು ನಾವು ನೋಡಿದ್ದೇವೆ. ಅವರ ಕುಟುಂಬ ಸದಸ್ಯರು ಅವರ ಸುರಕ್ಷಿತ ಮರಳುವಿಕೆಗಾಗಿ ಕಾಯುತ್ತಿರುತ್ತಾರೆ. ಆದ್ದರಿಂದ, ಪ್ರಯಾಣಿಕರಿಗೆ ಸಹಾಯ ಮಾಡಲು ನಾವು ಗುಂಡಿ ಮುಚ್ಚಲು ನಿರ್ಧರಿಸಿದೆವು. ನಮ್ಮ ಮನೆ ಈ ಕರುಣಾಜನಕ ರಸ್ತೆಯ ಮುಂದೆ ಇದೆ. ಪ್ರತಿ ಮಳೆಗಾಲದಲ್ಲಿ ನಾವು ಗುಂಡಿಗಳನ್ನು ಮುಚ್ಚುತ್ತೇವೆ. ಇದು ಪ್ರಚಾರಕ್ಕಾಗಿ ಅಲ್ಲ. ಸರ್ಕಾರವು ನಾಗರಿಕರಿಗೆ ಉತ್ತಮ ರಸ್ತೆಗಳನ್ನು ನೀಡಲು ವಿಫಲವಾದಾಗ, ಒಬ್ಬರಿಗೊಬ್ಬರು ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.

ಇನ್ನು ಮಳೆಯನ್ನು ಲೆಕ್ಕಿಸದೇ ಗುಂಡಿಗಳನ್ನು ಮುಚ್ಚುತ್ತಿರುವ ಆಶಾ ಕಾರ್ಯಕರ್ತೆ ಅನಂತವತಿ ಅವರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಈ ಕಾರ್ಯದಿಂದಾಗಿ ಈ ರಸ್ತೆಯಲ್ಲಿ ಸಂಭವಿಸಬಹುದಾದ ಅನೇಕ ಅಪಘಾತಗಳು ತಪ್ಪಿದಂತಾಗಿದೆ. ಅಲ್ಲದೆ ಇವರ ಕಾರ್ಯದಿಂದ ಸೂರ್ತಿಗೊಂಡು ಅನೇಕರು ಕೂಡ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಅನಂತವತಿ ಅವರಿಗೆ ಸಾಥ್ ನೀಡಿದ್ದಾರೆ ಎನ್ನಲಾಗಿದೆ.  

ಇದೇ ವಿಚಾರವಾಗಿ ಮಾತನಾಡಿದ ಉಪ್ಪಿನಂಗಡಿಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಾರ್ಯನಿರ್ವಾಹಕ ಎಂಜಿನಿಯರ್ ರಾಜಾರಾಮ್ ಅವರು, ವೆಟ್ ಮಿಕ್ಸ್ ಮಕಾಡಮ್ (ಡಬ್ಲ್ಯುಎಂಎಂ) ಬಳಸಿ ರಸ್ತೆಯನ್ನು ಸರಿಪಡಿಸಲಾಗಿದೆ. ಆದರೆ, ಭಾರೀ ಮಳೆಯಿಂದಾಗಿ ರಸ್ತೆ ಮತ್ತೆ ಹಾಳಾಗಿದೆ. ನಾವು ತಕ್ಷಣ ರಸ್ತೆಯನ್ನು ಸರಿಪಡಿಸುತ್ತೇವೆ. ಆಶಾ ಕಾರ್ಯಕರ್ತೆ ಮತ್ತು ಆಕೆಯ ಕುಟುಂಬದವರು ತಾವಾಗಿಯೇ ಗುಂಡಿಗಳನ್ನು ಮುಚ್ಚಿರುವ ಘಟನೆಯ ಬಗ್ಗೆ ನಮಗೂ ತಿಳಿದಿದೆ ಎಂದು ಅವರು ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com