ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಅಭಿವೃದ್ಧಿ: ಸಚಿವ ಡಾ. ಕೆ.ಸುಧಾಕರ್

ಕೋವಿಡ್ ಮೂರನೇ ಅಲೆಗೆ ಮುನ್ನೆಚ್ಚರಿಕೆಯಾಗಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ಸುಧಾಕರ್
ಸುಧಾಕರ್

ಬೆಂಗಳೂರು: ಕೋವಿಡ್ ಮೂರನೇ ಅಲೆಗೆ ಮುನ್ನೆಚ್ಚರಿಕೆಯಾಗಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಆಕ್ಸಿಜನ್ ಘಟಕಗಳನ್ನು ಪ್ರತಿ ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಆರಂಭಿಸಲಾಗುತ್ತಿದೆ. ಜೊತೆಗೆ ಎಲ್ಲ ಜಿಲ್ಲಾಸ್ಪತ್ರೆಯಲ್ಲಿ 70-80 ಹಾಸಿಗೆಗಳ ಸೌಲಭ್ಯದ ಮಕ್ಕಳ ಚಿಕಿತ್ಸಾ ವಿಭಾಗ ಮಾಡಿ, ಅದಕ್ಕೆ ಬೇಕಾದ ಮಕ್ಕಳ ತಜ್ಞರು, ನರ್ಸಿಂಗ್ ಸ್ಟಾಫ್ ಅನ್ನು ಹೆಚ್ಚುವರಿಯಾಗಿ ಪಡೆಯಲು ತೀರ್ಮಾನಿಸಲಾಗಿದೆ. 20 ಹಾಸಿಗೆಯ ಮಕ್ಕಳ ವಿಭಾಗವಿದ್ದರೆ ಅದನ್ನು 80 ಹಾಸಿಗೆಗೆ ಏರಿಸಲಾಗುವುದು. ಎಂಬಿಬಿಎಸ್ ವೈದ್ಯರು, ತಾಂತ್ರಿಕ ಸಿಬ್ಬಂದಿಗೆ ಮಕ್ಕಳಿಗೆ ಚಿಕಿತ್ಸೆ ನೀಡಲು ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಎರಡನೇ ಅಲೆಯಲ್ಲಿ ಬಂದ ರೂಪಾಂತರಿ ವೈರಾಣು ಪತ್ತೆಗೆ, 5 ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆಯಡಿಯ ಮಂಗಳೂರು ವೆನ್ ಲಾಕ್ ಹಾಗೂ ವಿಜಯಪುರ ಆಸ್ಪತ್ರೆ ಸೇರಿ ಒಟ್ಟು 7 ಕಡೆ ಜೀನೋಮಿಕ್ ಲ್ಯಾಬ್ ಗಳನ್ನು ಆರಂಭಿಸಲಾಗುವುದು. ವೈರಾಣು ಸ್ವಭಾವ ಅಧ್ಯಯನ ಮಾಡಿ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಇಲ್ಲಿ ತೀರ್ಮಾನಿಸಲಾಗುವುದು ಎಂದರು.

ಮುಖ್ಯಮಂತ್ರಿಗಳಿಂದ ತೀರ್ಮಾನ

ಲಾಕ್ ಡೌನ್ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಯಾವ ಬಗೆಯ ಲಾಕ್ ಡೌನ್ ಮಾಡಬೇಕು ಹಾಗೂ ಹೇಗೆ ಹಂತಹಂತವಾಗಿ ನಿರ್ಬಂಧ ಸಡಿಲಿಸಬೇಕೆಂದು ತೀರ್ಮಾನಿಸುತ್ತಾರೆ. ಕೋವಿಡ್ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ ಹಾಗೂ ಪ್ರಕರಣಗಳ ಸಂಖ್ಯೆ 5 ಸಾವಿರಕ್ಕಿಂತ ಇಳಿಕೆಯಾದರೆ ನಿರ್ಬಂಧ ಸಡಿಲಿಸಬಹುದು ಎಂದು ತಾಂತ್ರಿಕ ಸಲಹಾ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಆದರೆ ಅನೇಕ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಅಧಿಕವಿದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದರು.

1.64 ಲಕ್ಷ ಕೋವ್ಯಾಕ್ಸಿನ್ ಲಸಿಕೆ ಡೋಸ್ ರಾಜ್ಯಕ್ಕೆ ಬಂದಿದೆ. ಇದನ್ನು ಬಳಸಿ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲಾಗುತ್ತಿದೆ. ಜೂನ್ ಮೊದಲ ವಾರದೊಳಗೆ ಬಾಕಿ ಉಳಿದವರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ ಲಸಿಕಾಕರಣ ನಡೆಸಲಾಗುವುದು. ಮುಂದೆ ಲಸಿಕೆ ದೊರೆತಂತೆ, 18-44 ವರ್ಷದವರಿಗೆ ಲಸಿಕೆ ನೀಡಲಾಗುವುದು ಎಂದರು.

ಔಷಧಿ ಪಡೆಯಲು ಕ್ರಮ

ಬ್ಲ್ಯಾಕ್ ಫಂಗಸ್ ಕಣ್ಣಿಗೆ ತಲುಪಿದ ನಂತರ ಕಣ್ಣು ತೆಗೆಯಬೇಕಾಗಬಹುದು. ಅದು ಮಿದುಳಿಗೆ ತಲುಪದಿರಲು ಈ ರೀತಿ ಮಾಡಲಾಗುತ್ತದೆ. ಔಷಧಿ ಕೊರತೆ ಇದೆ ಎಂಬ ಕಾರಣಕ್ಕೆ ಇಂತಹ ತೀರ್ಮಾನ ಕೈಗೊಳ್ಳುವುದಿಲ್ಲ. ಇದು ಔಷಧಿ ಕೊರತೆಯಿಂದಾದ ಸಮಸ್ಯೆಯಲ್ಲ. ಬ್ಲ್ಯಾಕ್ ಫಂಗಸ್ ರೋಗಿಗೆ ಚಿಕಿತ್ಸೆ ನೀಡುವ ಬಗ್ಗೆ ದಂತವೈದ್ಯರು, ನೇತ್ರತಜ್ಞರು ಪರೀಕ್ಷಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಇದಕ್ಕೆ ಬೇಕಾದ ಔಷಧಿ ಅವಶ್ಯಕತೆಗೆ ಅನುಗುಣವಾಗಿ ಸಿಗುತ್ತಿಲ್ಲ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನ ಔಷಧಿ ಪಡೆಯಲು ಕ್ರಮ ವಹಿಸಲಾಗಿದೆ ಎಂದರು.

ಕೋವಿಡ್ ನಿಂದ ಗುಣಮುಖರಾದ ಇಬ್ಬರು ಮಕ್ಕಳಿಗೆ ಕವಾಸಕಿ ಸೋಂಕು ಬಂದಿರುವ ಸಾಧ್ಯತೆ ಇದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸಾಮಾಜಿಕ ಹಿನ್ನೆಲೆ, ಪೌಷ್ಠಿಕ ಆಹಾರದ ಕೊರತೆ ಕೂಡ ಕಾರಣ. ಈ ಮಕ್ಕಳ ಚಿಕಿತ್ಸೆಗೆ ಹೆಚ್ಚು ಗಮನಹರಿಸಲು ಸೂಚಿಸಲಾಗಿದೆ. ಹಾಗೆಯೇ ಈ ಸೋಂಕು ಏಕೆ ಬಂದಿದೆ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com