ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗಿಳಿವವರೆಗೆ ಲಾಕ್ಡೌನ್ ವಿಸ್ತರಿಸಿ: ಸರ್ಕಾರಕ್ಕೆ ತಜ್ಞರ ಸಮಿತಿ ಸಲಹೆ

ನಿತ್ಯದ ಸೋಂಕಿನ ಪ್ರಮಾಣ 5 ಸಾವಿರದೊಳಗೆ ಬರಬೇಕು ಹಾಗೂ ಪಾಸಿಟಿವಿಟಿ ದರ ಶೇ.5 ಮತ್ತು ಸಾವಿನ ದರ ಶೇ.1ರ ಮಿತಿಯೊಳಗೆ ಬರಬೇಕು. ಇಷ್ಟು ಬೆಳವಣಿಗೆಗಳು ಕಂಡು ಬರುವವರೆಗೂ ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸಬೇಕು.ಈ ಗುರಿ ಸಾಧನೆ ಜೂ.7ರೊಳಗೆ ಅಸಂಭವವಾದ ಕಾರಣ ಕನಿಷ್ಟ ಒಂದು ವಾರ ಲಾಕ್ಡೌನ್ ವಿಸ್ತರಿಸಿ ಎಂದು ಕೊರೋನಾ ತಾಂತ್ರಿಕ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಿತ್ಯದ ಸೋಂಕಿನ ಪ್ರಮಾಣ 5 ಸಾವಿರದೊಳಗೆ ಬರಬೇಕು ಹಾಗೂ ಪಾಸಿಟಿವಿಟಿ ದರ ಶೇ.5 ಮತ್ತು ಸಾವಿನ ದರ ಶೇ.1ರ ಮಿತಿಯೊಳಗೆ ಬರಬೇಕು. ಇಷ್ಟು ಬೆಳವಣಿಗೆಗಳು ಕಂಡು ಬರುವವರೆಗೂ ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸಬೇಕು.ಈ ಗುರಿ ಸಾಧನೆ ಜೂ.7ರೊಳಗೆ ಅಸಂಭವವಾದ ಕಾರಣ ಕನಿಷ್ಟ ಒಂದು ವಾರ ಲಾಕ್ಡೌನ್ ವಿಸ್ತರಿಸಿ ಎಂದು ಕೊರೋನಾ ತಾಂತ್ರಿಕ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. 

ಕೊರೋನಾ ಕುರಿತು ಸಲಹೆ ನೀಡಲು ಸರ್ಕಾರ ರಚಿಸಿರುವ ತಾಂತ್ರಿಕ ಸಲಹಾ ಸಮಿತಿಯು ಭಾನುವಾರ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ನೇತೃತ್ವದಲ್ಲಿ ಐದೂವರೆ ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿ, ಬಳಿಕ ಈ ಮಹತ್ವದ ಶಿಫಾರಸು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 

ತಾಂತ್ರಿಕ ಸಮಿತಿಯು ವರದಿಯನ್ನು ಸೋಮವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಹಸ್ತಾಂತರಿಸಿದ್ದು, ವರದಿ ಸಂಬಂಧ ಈಗಾಗಲೇ ಸಚಿವರು ಹಲವು ಸ್ಪಷ್ಟನೆಗಳನ್ನು ಪಡೆದಿದ್ದಾರೆ. ಅಂತಿಮವಾಗಿ ವರದಿಯಲ್ಲಿನ ಅಂಶಗಳ ಬಗ್ಗೆ ಜೂನ್.4 ಅಥವಾ 5 ರಂದು ಸರ್ಕಾರದ ಹಂತದಲ್ಲಿ ಸಭೆ ನಡೆಯಲಿದ್ದು.  ಈ ವೇಳೆ ಜೂ.7ರ ಬಳಿಕವೂ ಲಾಕ್ಡೌನ್ ಮುಂದುವರೆಸುವ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ. 

ವರದಿಯಲ್ಲಿ ಲಾಕ್ಡೌನ್ ಹಿಂಪಡೆಯಲು ಕೊರೋನಾ ಪ್ರಕರಣಗಳಿಗೆ ಸಂಬಂಧಿಸಿದ ನಿರ್ದಿಷ್ಟ ಸಂಖ್ಯೆಯ ಗುರಿ ನೀಡಲಾಗಿದೆ. ಈ ಗುರಿ ಸಾಧನೆಗೂ ಮುನ್ನ ಲಾಕ್ಡೌನ್ ಹಿಂಪಡೆದರೆ ಇದೂವರೆಗೆ ಮಾಡಲಾಗಿರುವ ಲಾಕ್ಡೌನ್'ನಿಂದ ಯಾವುದೇ ಪ್ರಯೋಜನ ಲಭಿಸುವುದಿಲ್ಲ ಎಂದು ಎಚ್ಚರಿಸಿದೆ. 

ಪ್ರಸ್ತುತ ರಾಜ್ಯದಲ್ಲಿನ ಪಾಸಿಟಿವಿಟಿ ದರ ಸರಾಸರಿ ಶೇ.15 ಹಾಗೂ ನಿತ್ಯದ ಪ್ರಕರಣ 15 ಸಾವಿರಕ್ಕೂ ಹೆಚ್ಚಿವೆ. ಸಾವಿನ ದರ ಶೇ.2.50ರ ಆಸುಪಾಸಿನಲ್ಲಿದೆ. ಈ ಸ್ಥಿತಿಯಿಂದ ಜೂ.7ರ ವೇಳೆಗೆ 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಹಾಗೂ ಸಾವಿನ ದರ ಶೇ.1ಕ್ಕಿಂತ ಕಡಿಮೆಯಾಗುವ ಹಂತ ತಲುಪಲು ಸಾಧ್ಯವಿಲ್ಲ. ಹೀಗಾಗಿ ಜೂ.7 ರಂದು ಪ್ರಗತಿ ಪರಿಶೀಲನೆ ನಡೆಸಿ ಜೂ.13ರವರೆಗೆ ಲಾಕ್ಡೌನ್ ಮುಂದುವರೆಸಬೇಕಾಗುತ್ತದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. 

ವೈಜ್ಞಾನಿಕ ಸಲಹೆ ಆಧರಿಸಿ ನಿರ್ಬಂಧಗಳ ಸಡಿಲಗೊಳಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಜನಪ್ರತಿನಿಧಿಗಳು ಜನರೊಂದಿಗೆ ಬಹಳ ಹತ್ತಿರದಿಂದ ಕೆಲಸ ಮಾಡುತ್ತಿರುವುದರಿಂದ ಅವರಿಗೆ ವಾಸ್ತವ ಸ್ಥಿತಿಗತಿ ಬಗ್ಗೆ ಅರಿವಿದೆ. ಜನರ ಅಭಿಪ್ರಾಯವನ್ನೇ ಸಾಕಷ್ಟು ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಆದರೆ, ವೈಜ್ಞಾನಿಕ ಸಲಹೆ ಆಧಾರದ ಮೇಲೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿರುವ ಪ್ರಕಾರ ಮುಂದಿನ ಕೊರೋನಾ ಅಲೆ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ. ಅಲ್ಲಿಯವರೆಗೆ ನಮಗೆ ನಾಲ್ಕು ತಿಂಗಳು ಕಾಲಾವಕಾಶವಿದೆ. ಅಷ್ಟರಲ್ಲಿ ಕ್ಲಿನಿಕಲ್ ಸೌಲಭ್ಯ, ತರಬೇತಿ, ಮಾನವ ಸಂಪನ್ಮೂಲಗಳನ್ನು ಹೆಚ್ಚಿಸಬೇಕಿದೆ. ಕೊರೋನಾ ಮೂರನೇ ಅಲೆಯು 0-9 ವರ್ಷ ವಯಸ್ಸಿನ ಮಕ್ಕಳ ಜನಸಂಖ್ಯೆಯಲ್ಲಿ ಮರಣ ಪ್ರಮಾಣವನ್ನು ಶೇಕಡಾ 4 ರಷ್ಟು ಹೆಚ್ಚಿಸುತ್ತದೆ ಮತ್ತು ಪ್ರಕರಣಗಳಲ್ಲಿ ಶೇಕಡಾ 43 ರಷ್ಟು ಏರಿಕೆಯಾಗುತ್ತದೆ ಎಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ.. ಅಲ್ಲದೆ, 3ನೇ ಅಲೆಯು 10-19 ವರ್ಷ ವಯಸ್ಸಿನ ಮಕ್ಕಳಲ್ಲಿ ಮರಣದ ಪ್ರಮಾಣವು ಶೇಕಡಾ 6 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ 60 ಪ್ರತಿಶತದಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com