ವಿಶ್ವ ತಂಬಾಕು ರಹಿತ ದಿನಾಚರಣೆ: ತಂಬಾಕು ಮುಕ್ತ ಪೀಳಿಗೆ ಸೃಷ್ಠಿಗೆ ಕೈಜೋಡಿಸಿದ ಮಕ್ಕಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು

ವಿಶ್ವ ತಂಬಾಕು ರಹಿತ ದಿನಾಚರಣೆ 2021ರ ಅಂಗವಾಗಿ ಮಕ್ಕಳು, ಪೋಷಕರು, ಶಿಕ್ಷಕರು, ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಕೈಜೋಡಿಸಿ ‘ತಂಬಾಕು ಮುಕ್ತ ಪೀಳಿಗೆ’ ನಿರ್ಮಾಣ ಮಾಡಲು ಪಣತೊಟ್ಟು, ತಂಬಾಕು ಮುಕ್ತ ಪೀಳಿಗೆ ನಿರ್ಮಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.
ತಂಬಾಕು(ಸಾಂಕೇತಿಕ ಚಿತ್ರ)
ತಂಬಾಕು(ಸಾಂಕೇತಿಕ ಚಿತ್ರ)

ಬೆಂಗಳೂರು: ವಿಶ್ವ ತಂಬಾಕು ರಹಿತ ದಿನಾಚರಣೆ 2021ರ ಅಂಗವಾಗಿ ಮಕ್ಕಳು, ಪೋಷಕರು, ಶಿಕ್ಷಕರು, ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಕೈಜೋಡಿಸಿ ‘ತಂಬಾಕು ಮುಕ್ತ ಪೀಳಿಗೆ’ ನಿರ್ಮಾಣ ಮಾಡಲು ಪಣತೊಟ್ಟು, ತಂಬಾಕು ಮುಕ್ತ ಪೀಳಿಗೆ ನಿರ್ಮಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.

ತಂಬಾಕು ಮುಕ್ತ ಪೀಳಿಗೆ ನಿರ್ಮಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಮನವಿ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ. ಶಶಿಕಲಾ ಜೊಲ್ಲೆ ಅವರಿಗೆ ಸಲ್ಲಿಸಲಾಯಿತು.

ತಂಬಾಕು ಮುಕ್ತ ಪೀಳಿಗೆಯು ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತ ಸೇರಿದಂತೆ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಪ್ರೋತ್ಸಾಹಿಸುತ್ತಿರುವ ಅಭಿಯಾನವಾಗಿದೆ. ತಂಬಾಕು ಬಳಕೆದಾರರ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದ್ದು (268 ಮಿಲಿಯನ್), ಪ್ರತಿವರ್ಷ 13 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತಿದ್ದಾರೆ. ಭಾರತದಲ್ಲಿನ ಎಲ್ಲ ವಿಧದ ಕ್ಯಾನ್ಸರ್ ಗಳಿಗೆ ತಂಬಾಕು ಬಳಕೆ ಶೇ.  27%ರಷ್ಟು ಕಾರಣವಾಗಿದೆ. ಯುವಜನರಲ್ಲಿ ತಂಬಾಕು ಬಳಕೆ ಕುರಿತ ಜಾಗತಿಕ ಸಮೀಕ್ಷೆ (GYTS) ಪ್ರಕಾರ, ಭಾರತದಲ್ಲಿ ಶೇ. 14.6 ಕ್ಕಿಂತಲೂ ಹೆಚ್ಚು ಹದಿಹರೆಯದವರು (13-15 ವರ್ಷದವರು) ತಂಬಾಕನ್ನು ಬಳಸುತ್ತಾರೆ. 

ವಿಶ್ವ ತಂಬಾಕು ರಹಿತ ದಿನಾಚರಣೆ 2021ರ ಅಂಗವಾಗಿ ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಸೋಮವಾರ ಆಯೋಜಿಸಿದ್ದ ‘ವಾಯ್ಸ್  ಫಾರ್ ಟೊಬ್ಯಾಕೊ-ಫ್ರೀ ಜನರೇಶನ್’ ವೆಬಿನಾರ್ ನಲ್ಲಿ ಮಾತನಾಡಿದ ಕಾಲೇಜು ವಿದ್ಯಾರ್ಥಿನಿ ಸಪ್ನಾ ಹೆಚ್. ಎಂ, "ಪ್ರಸ್ತುತ, ತಂಬಾಕು ಉತ್ಪನ್ನಗಳನ್ನು ಯಾರು ಯಾರಿಗಾದರೂ ಮತ್ತು ಎಲ್ಲಿಯಾದರೂ ಮಾರಾಟ ಮಾಡಲಾಗುತ್ತಿದೆ. ತಂಬಾಕು ಉತ್ಪನ್ನಗಳು ಮಕ್ಕಳಿಗೆ ಲಭ್ಯವಾಗದಂತೆ ನೋಡಿಕೊಳ್ಳುವುದು ತಂಬಾಕು ಮುಕ್ತ ಪೀಳಿಗೆ ನಿರ್ಮಿಸುವ ನಿಟ್ಟಿನಲ್ಲಿ ಇಡುವ ಮೊದಲ ಮಹತ್ವದ ಹೆಜ್ಜೆಯಾಗುತ್ತದೆ. ಇದನ್ನು ಮಾರಾಟಗಾರರ ಪರವಾನಗಿ ಕಡ್ಡಾಯ ಮಾಡುವ ಮೂಲಕ ಸಾಧ್ಯವಾಗಿಸಬಹುದು, ಎಂದು ಹೇಳಿದರು.

ವೆಬಿನಾರ್ ನಲ್ಲಿ ಭಾಗಿಯಾಗಿ ಮನವಿಪತ್ರ ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ, ತನ್ನ ಬಳಕೆದಾರರನ್ನು ಬಲಿಪಡಿಯುವ ಕೆಲವೇ ಉತ್ಪನ್ನಗಳಲ್ಲಿ ತಂಬಾಕು ಕೂಡ ಒಂದು. ಚಲನಚಿತ್ರ ಮತ್ತು ಜಾಹೀರಾತುಗಳಲ್ಲಿ ತಂಬಾಕನ್ನು ವೈಭವೀಕರಿಸುವುದು ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ತಂಬಾಕು ಬಳಕೆಯನ್ನು ತಗ್ಗಿಸಲು ಮನವಿಪತ್ರದಲ್ಲಿ ಮುಂದಿಟ್ಟಿರುವ ಶಿಫಾರಸ್ಸುಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ, ಎಂದರು.

ಮಕ್ಕಳು ತಮ್ಮ ಮನೆಯ ವಾತಾವರಣದಿಂದ ಹೆಚ್ಚು ಕಲಿಯುತ್ತಾರೆ. ಮನೆಗಳಲ್ಲೇ ತಂಬಾಕು ಬಳಕೆ ನಿಲ್ಲಬೇಕು. ತಂಬಾಕು ಬಳಕೆ ಕಡಿಮೆ ಮಾಡುವಲ್ಲಿ ಮಕ್ಕಳು, ಪೋಷಕರು, ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ, ಎಂದೂ ಜೊಲ್ಲೆ ತಿಳಿಸಿದರು.

ಮಕ್ಕಳಿಗೆ ತಂಬಾಕು ಉತ್ಪನ್ನಗಳು ಸುಲಭವಾಗಿ ಸಿಗದಂತೆ ಮಾಡಲು ತಂಬಾಕು ಮಾರಾಟಕ್ಕೆ ಮಾರಾಟಗಾರರ ಪರವಾನಗಿ ಕಡ್ಡಾಯಗೊಳಿಸುವುದು, ತಂಬಾಕಿನ ಹಾನಿಕಾರಕ ಪರಿಣಾಮಗಳು ಮತ್ತು ತಂಬಾಕು ನಿಯಂತ್ರಣಕ್ಕೆ ಇರುವ ಕಾನೂನುಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು, ವಿವಿಧ ಸುವಾಸನೆಗಳ ಮೂಲಕ ಮಕ್ಕಳನ್ನು ತನ್ನತ್ತ ಆಕರ್ಷಿಸುವ ಹುಕ್ಕಾ ಬಾರ್ ಗಳನ್ನು ನಿಷೇಧಿಸುವುದು, ಜಗಿಯುವ ತಂಬಾಕಿನ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವುದು, ಮತ್ತು ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಬೆಳೆಯುವಂತೆ ಉತ್ತೇಜಿಸಲು ಕ್ರಮಕೈಗೊಳ್ಳುವುದು ಸೇರಿದಂತೆ ಹಲವು ಶಿಫಾರಸುಗಳು ಮನವಿ ಪತ್ರದಲ್ಲಿವೆ. ಈ ಪತ್ರವನ್ನು ಮುಖ್ಯಮಂತ್ರಿ  ಶ್ರೀ. ಬಿ. ಎಸ್. ಯಡಿಯೂರಪ್ಪ, ಗೃಹ ಮತ್ತು ಕಾನೂನು ಸಚಿವ ಶ್ರೀ. ಬಸವರಾಜ ಬೊಮ್ಮಾಯಿ, ಮತ್ತು ನಗರಾಭಿವೃದ್ಧಿ ಸಚಿವ ಶ್ರೀ. ಭೈರತಿ ಬಸವರಾಜ್ ಅವರಿಗೂ ಸಲ್ಲಿಸಲಾಗುವುದು.

ಕನ್ಸೋರ್ಟಿಯಂ ಫಾರ್ ಟೊಬ್ಯಾಕೋ ಫ್ರೀ ಕರ್ನಾಟಕದ (ಸಿಎಫ್‌ಟಿಎಫ್‌ಕೆ) ಸಂಚಾಲಕರಾದ ಎಸ್. ಜೆ. ಚಂದರ್ ಮಾತನಾಡಿ, “ತಂಬಾಕು ಅಪ್ರಾಪ್ತರ ಮೇಲೆ ವ್ಯಸನಕಾರಿ ಪ್ರಭಾವ ಬೀರುತ್ತದೆ. ಮಕ್ಕಳನ್ನು ಸುಲಭವಾಗಿ ಪ್ರಭಾವಿಸಬಹುದು. ಇದರಿಂದ ಮಕ್ಕಳು ತಂಬಾಕು ಉದ್ಯಮದ ಮುಖ್ಯ ಗುರಿಯಾಗಿದ್ದಾರೆ. ಅಪ್ರಾಪ್ತರಿಗೆ ತಂಬಾಕಿನ ಲಭ್ಯತೆಯನ್ನು ನಿಷೇಧಿಸಬೇಕು. ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಈಗ ಪ್ರಾರಂಭಿಸಿರುವ ಅಭಿಯಾನ ಮುಂದಿನ ದಿನಗಳಲ್ಲಿ ಬಹುದೊಡ್ಡ ಚಳುವಳಿಯಾಗಿ ಹೊರಹೊಮ್ಮಲಿದೆ ಎಂದರು.

ಕ್ಯಾನ್ಸರ್ ತಜ್ಞ ಡಾ. ರಮೇಶ್ ಬಿಳಿಮಗ್ಗ, ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್, ನಿಮ್ಹಾನ್ಸ್ ನ  ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಹಾಗು ಟೊಬ್ಯಾಕೊ ಕ್ವಿಟ್‌ಲೈನ್‌ನ ಉಸ್ತುವಾರಿ ಡಾ. ಪ್ರತಿಮಾ ಮೂರ್ತಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಯೂನಿವರ್ಸಿಟಿಯ ಕಾನೂನು ಪ್ರಾಧ್ಯಾಪಕ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಅಶೋಕ್ ಆರ್. ಪಾಟೀಲ್, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಮತ್ತು ಇತರರು ಮಕ್ಕಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ವೆಬಿನಾರ್‌ನಲ್ಲಿ ಭಾಗವಹಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com