ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ರದ್ದು; ಕಾದು ನೋಡುವ ಸಚಿವ ಸುರೇಶ್ ಕುಮಾರ್ ನಿರ್ಧಾರಕ್ಕೆ ಪೋಷಕರ ಕಿಡಿ

ಸಿಬಿಎಸ್ಇ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿದ್ದು, ರಾಜ್ಯ ಸರ್ಕಾರ ಮಾತ್ರ ಪರೀಕ್ಷೆಗಳನ್ನು ರದ್ದು ಮಾಡದೆ ಕಾದು ನೋಡುವ ನಿರ್ಧಾರಕ್ಕೆ ಬಂದಿರುವುದು ಪೋಷಕರು, ವಿದ್ಯಾರ್ಥಿಗಳ ವಿರೋಧಕ್ಕೆ ದಾರಿ ಮಾಡಿಕೊಟ್ಟಿದೆ. 
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್

ಬೆಂಗಳೂರು: ಸಿಬಿಎಸ್ಇ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿದ್ದು, ರಾಜ್ಯ ಸರ್ಕಾರ ಮಾತ್ರ ಪರೀಕ್ಷೆಗಳನ್ನು ರದ್ದು ಮಾಡದೆ ಕಾದು ನೋಡುವ ನಿರ್ಧಾರಕ್ಕೆ ಬಂದಿರುವುದು ಪೋಷಕರು, ವಿದ್ಯಾರ್ಥಿಗಳ ವಿರೋಧಕ್ಕೆ ದಾರಿ ಮಾಡಿಕೊಟ್ಟಿದೆ. 

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಸುರೇಶ್ ಕುಮಾರ್ ಅವರು, ಕೇಂದ್ರೀಯ ಮಂಡಳಿಯು ಪರೀಕ್ಷೆ ರದ್ದು‌ ಮಾಡಿರುವ ಹಿನ್ನೆಲೆ, ರಾಜ್ಯ ಪಠ್ಯಕ್ರಮ ಅನುಸರಿಸಿ‌ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿಗಳು, ಮೌಲ್ಯಮಾಪನದ ಅವಶ್ಯಕತೆ‌ ಕುರಿತಂತೆ ಈಗಾಗಲೇ ರೂಪಿತವಾಗಿರುವ ಅಭಿಪ್ರಾಯಗಳ ವಿಸ್ತೃತ ಚರ್ಚೆ‌ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದರು. 

ಆದರೆ, ಸಚಿವರ ಈ ಹೇಳಿಕೆಗೆ ಅಸಮಾಧಾನಗೊಂಡಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರವೇ ಪರೀಕ್ಷೆಗಳನ್ನು ರದ್ದುಗೊಳಿಸಿರುವಾಗ ರಾಜ್ಯವೇಕೆ ಮಾಡುತ್ತಿಲ್ಲ ಎಂದು ಹಲವು ಪ್ರಶ್ನೆ ಮಾಡುತ್ತಿದ್ದಾರೆ. 

ರಾಜ್ಯ ಸರ್ಕಾರ ನಿರ್ಧಾರ ವಿದ್ಯಾರ್ಥಿಗಳಲ್ಲಿ ಭೇದಭಾವ ಮೂಡಿಸುತ್ತದೆ. ಪರೀಕ್ಷೆಗೆ ನಾವು ಪೂರ್ಣ ಸಿದ್ಧತೆಗಳನ್ನೂ ನಡೆಸಿಲ್ಲ. ಸರ್ಕಾರ ಯಾವ ರೀತಿಯ ಮೌಲ್ಯಮಾಪನ ನಡೆಸುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ವಿದ್ಯಾರ್ಥಿ ಬಿಂದು ಎಂಬವವರು ಹೇಳಿದ್ದಾರೆ. 

ಸಿಬಿಎಸ್‌ಇ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮನ್ಸೂರ್‌ ಅಲಿ ಖಾನ್‌ ಅವರು ಮಾತನಾಡಿ, ಕೇಂದ್ರ ಸರ್ಕಾರದ ನಿರ್ಧಾರ ಉತ್ತಮವಾಗಿದೆ. ಈ ಸಮಯದಲ್ಲಿ ಪರೀಕ್ಷೆ ನಡೆಸುವುದು ಅತ್ಯಂತ ಅಪಾಯಕಾರಿಯಾಗಲಿದೆ. 12ನೇ ತರಗತಿಯ ಮೌಲ್ಯಮಾಪನ ಮಾಡುವ ಕುರಿತು ಇದೀಗ ಸಿಬಿಎಸ್'ಇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕಿದೆ ಎಂದು ಹೇಳಿದ್ದಾರೆ. 

ಈ ನಡುವೆ 12ನೇ ತರಗತಿ ಪರೀಕ್ಷೆಗಳ ರದ್ದು ಮಾಡಿರುವ ಕುರಿತು ಕೆಲವೆಡೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. 

ಪೋಷಕರೊಬ್ಬರು ಈ ಕುರಿತು ಪ್ರತಿಕ್ರಿಯೆ ನೀಡಿ, ಒಬ್ಬ ತಾಯಿಯಾಗಿ ನನಗೆ ಪರೀಕ್ಷೆ ರದ್ದು ಮಾಡಿರುವುದು ಇಷ್ಟವಾಗಿಲ್ಲ. ನನ್ನ ಮಗಳು ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಈ ಬಾರಿಯ ಪರೀಕ್ಷೆಯಲ್ಲಿ ಶೇ.92 ರಷ್ಟು ಫಲಿತಾಂಶದ ನಿರೀಕ್ಷೆಯಲ್ಲಿದ್ದೆವು. ಉತ್ತಮವಾಗಿ ಸಿದ್ಧತೆಗಳನ್ನೂ ನಡೆಸಿದ್ದಳು. ಪ್ರಥಮು ಪಿಯುಸಿಯಲ್ಲಿಯೂ ಉತ್ತಮ ಫಲಿತಾಂಶ ಬಂದಿತ್ತು. ಹೀಗಾಗಿ ದ್ವಿತೀಯ ಪಿಯುಸಿಯಲ್ಲಿಯೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ವಿದ್ಯಾರ್ಥಿಗಳು ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ. 12ನೇ ತರಗತಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಭವಿಷ್ಯದ ನಿರ್ಣಾಯಕ ಪರೀಕ್ಷೆಯಾಗಿತ್ತು ಎಂದು ಪೋಷಕರಾದ ಜೈಸ್ವಾಲ್ ಎಂಬುವವರು ಹೇಳಿದ್ದಾರೆ. 

ಪರೀಕ್ಷೆ ರದ್ದಾದರೂ ವಿದ್ಯಾರ್ಥಿಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಕುರಿತು ಆತಂಕ ಮನೆ ಮಾಡಿದೆ. ಪರೀಕ್ಷೆ ರದ್ದಾಗಿರುವುದೇನೋ ಖುಷಿ ತಂದಿದೆ. ಆದರೆ, ಫಲಿತಾಂಶವನ್ನು ಯಾವ ಆಧಾರದ ಮೇಲೆ ನೀಡುತ್ತಾರೆ. ಹೇಗೆ ನೀಡುತ್ತಾರೆಂಬ ಆತಂಕ ಶುರುವಾಗಿದೆ ಎಂದು ಸಿಬಿಎಸ್ಇ ವಿದ್ಯಾರ್ಥಿ ಸಂಜನಾ ಎಂಬುವವರು ಹೇಳಿದ್ದಾರೆ. 

ಈ ನಡುವೆ ಪರೀಕ್ಷೆ ರದ್ದುಗೊಳಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರವನ್ನು  ರಾಜ್ಯ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಕೊಂಡಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com