ಬ್ಲ್ಯಾಕ್ ಫಂಗಸ್'ಗೆ ಬಳಸಲಾಗುತ್ತಿರುವ ಆಂಫೊಟೆರಿಸಿನ್-ಬಿ ಔಷಧಿಯನ್ನು ಮಿತವಾಗಿ ಬಳಸಿ: ವೈದ್ಯರಿಗೆ ಸರ್ಕಾರ

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಬಳಿಕ ಕಪ್ಪು ಹಾಗೂ ಬಿಳಿ ಶಿಲೀಂಧ್ರ ರೋಗದ ಔಷಧಿಗಳ ಕೊರತೆ ಶುರುವಾಗಿದೆ. ಹಿನ್ನೆಲೆಯಲ್ಲಿ ಈ ರೋಗಕ್ಕೆ ಪ್ರಸ್ತುತ ಬಳಕೆ ಮಾಡಲಾಗುತ್ತಿರುವ ಆಂಫೊಟೆರಿಸಿನ್-ಬಿ ಔಷಧಿಯನ್ನು ಮಿತವಾಗಿ ಬಳಕೆ ಮಾಡುವಂತೆ ರಾಜ್ಯ ಸರ್ಕಾರ ವೈದ್ಯರಿಗೆ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ವೈರಸ್ ಅಬ್ಬರ ನಡುವೆಯೇ ಬ್ಲ್ಯಾಕ್ ಹಾಗೂ ವೈಟ್ ಫಂಗಸ್ ರೋಗದ ತಲೆನೋವು ಶುರುವಾಗಿದ್ದು, ಆಕ್ಸಿಜನ್ ಕೊರತೆ ಬಳಿಕ ಕಪ್ಪು ಹಾಗೂ ಬಿಳಿ ಶಿಲೀಂಧ್ರ ರೋಗದ ಔಷಧಿಗಳ ಕೊರತೆ ಶುರುವಾಗಿದೆ. ಹಿನ್ನೆಲೆಯಲ್ಲಿ ಈ ರೋಗಕ್ಕೆ ಪ್ರಸ್ತುತ ಬಳಕೆ ಮಾಡಲಾಗುತ್ತಿರುವ ಆಂಫೊಟೆರಿಸಿನ್-ಬಿ ಔಷಧಿಯನ್ನು ಮಿತವಾಗಿ ಬಳಕೆ ಮಾಡುವಂತೆ ರಾಜ್ಯ ಸರ್ಕಾರ ವೈದ್ಯರಿಗೆ ಸೂಚನೆ ನೀಡಿದೆ. 

ಬ್ಲ್ಯಾಕ್ ಫಂಗಸ್ ರೋಗಕ್ಕೆ ಒಳಗಾಗಿರುವ ಎಲ್ಲರಿಗೂ ಔಷಧಿಯ ಅಗತ್ಯ ಎದುರಾಗುತ್ತಿಲ್ಲ. ಔಷಧಿಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ವೈದ್ಯರು ಅಗತ್ಯವಿದ್ದರೆ ಮಾತ್ರ ಬಳಕೆ ಮಾಡಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. 

ಪ್ರತೀನಿತ್ಯ 500-600 ವಯಲ್ಸ್ ಗಳನ್ನು ಮಾತ್ರ ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ. ಆದರೆ, ಬೇಡಿಕೆಗಳು ಮಾತ್ರ ಹೆಚ್ಚಾಗುತ್ತಲೇ ಇದೆ. ಮೊದಲು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ರೆಮ್ಡೆಸಿವಿರ್ ಔಷಧಿಗೆ ಕೊರತೆ ಶುರುವಾಗಿತ್ತು. ಇದೀಗ ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧಿಗಳ ಕೊರತೆ ಶುರುವಾಗಿದೆ. ತಯಾರಿಕರ ಕಂಪನಿಗಳಿಂದ ಔಷಧಿಗಳು ಸೂಕ್ತ ರೀತಿಯಲ್ಲಿ ಬಾರದ ಹೊರತು ನಾವು ಔಷಧಿಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವೈದ್ಯರು ರೋಗಿಗಳ ಆದ್ಯತೆ ಮೇರೆಗೆ ಔಷಧಿಗಳನ್ನು ಬಳಕೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

ರಾಜ್ಯ ಸರ್ಕಾರ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಈ ವರೆಗೂ ಬ್ಲ್ಯಾಕ್, ವೈಟ್ ಫಂಗಸ್ ನಿಂದ ಬಳಲುತ್ತಿರುವ 733 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ 328 ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಪ್ರತೀಯೊಬ್ಬ ರೋಗಿಗೂ 4 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯ ನೀಡಬೇಕಾಗುತ್ತದೆ. ರಾಜ್ಯದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ರೋಗಕ್ಕೊಳಗಾಗಿರುವ ಎಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. 

ಸರ್ಕಾರದ ಈ ಸೂಚನೆಗೆ ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಆ ರೀತಿ ಮಾಡಿದ್ದೇ ಆದರೆ, ಅದು ಅನೈತಿಕ ಹಾಗೂ ನಮ್ಮ ವೃತ್ತಿಯ ನಿಯಮಗಳಿಗೆ ವಿರುದ್ಧವಾಗುತ್ತದೆ. ನಿಮ್ಮ ಪರಿಸ್ಥಿತಿ ಚಿಂತಾಜನಕವಾಗಿಲ್ಲ ಹೀಗಾಗಿ ನಿಮಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ ಎಂದು ರೋಗಿಗೆ ತಿಳಿಸಲು ಸಾಧ್ಯವಿಲ್ಲ. ಆಂಫೊಟೆರಿಸಿನ್-ಬಿ ಔಷಧಿ ಕೊರತೆ ಇರುವ ಕಾರಣ ಬದಲಿ ಔಷಧಿಗಳನ್ನು ನೀಡುತ್ತೇವೆಂದು ರೋಗಿಗಳಿಗೆ ತಿಳಿಸಬಹುದು. ನಮಗೆ ಎಲ್ಲಾ ರೋಗಿಗಳು ಒಂದೇ ಆಗಿದ್ದಾರೆ. ಯಾವುದೇ ರೋಗವಾದರೂ ಅದನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸಬೇಕು. ಪರಿಸ್ಥಿತಿ ಗಂಭೀರವಾಗುವವರೆಗೂ ಕಾಯಬಾರದು ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ. 

ಈ ಸಂಕಷ್ಟ ಬಹಳ ಕಾಲ ಇರುವುದಿಲ್ಲ. ರೆಮ್ಡೆಸಿವಿರ್ ಔಷಧಿ ಕೊರತೆ ಇದೀಗ ಸರಿಹೋಗಿದೆ. ಅದೇ ರೀತಿಯಲ್ಲಿಯೇ ಆಂಫೊಟೆರಿಸಿನ್-ಬಿ ಔಷಧಿ ಕೊರತೆ ಕೂಡ ಸರಿಹೋಗಲಿದೆ. ಕಾಳಸಂತೆ ಮಾರಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗಳು ಹೆಚ್ಚಾಗಿವೆ. ಹಿಂದೆ ಸಂಭವಿಸಿದ ಘಟನೆಗಳಿಂದ ಸರ್ಕಾರ ಪಾಠ ಕಲಿಯಬೇಕಿದ್ದು, ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಆರೋಗ್ಯ ಸಚಿವ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿ, ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಸೋಂಕು ಕಣ್ಣುಗಳ ವರೆಗೂ ತಲುಪಿದೆ. ಹೀಗಾಗಿ ಸೋಂಕು ಮಿದುಳಿನವರೆಗೂ ತಲುಪದಂತೆ ಮಾಡಲು ಆ ಭಾಗವನ್ನು ತೆಗೆಯಲೇಬೇಕಾಗುತ್ತದೆ. ಕಪ್ಪು ಶಿಲೀಂಧ್ರದ ಚಿಕಿತ್ಸೆಯನ್ನು ನೇತ್ರಶಾಸ್ತ್ರಜ್ಞರು ಮತ್ತು ಇಎನ್‌ಟಿ ತಜ್ಞರು ಪ್ರತಿ ಪ್ರಕರಣದ ಸ್ಥಿತಿಯ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುತ್ತಾರೆ. ಔಷಧಗಳ ಸಂಪರ್ಕ ಪೂರೈಕೆಗಾಗಿ ಕೇಂದ್ರ ಸಚಿವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆಂದು ಹೇಳಿದ್ದಾರೆ. 

ಬ್ಲ್ಯಾಕ್ ಫಂಗಸ್; ಸಿಲಿಕಾನ್ ಸಿಟಿ ಆಸ್ಪತ್ರೆಗಳಲ್ಲಿ ಹೆಚ್ಚಿದ ಸಾವು ಪ್ರಕರಣ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ರೋಗ ಉಲ್ಬಣಗೊಳ್ಳುತ್ತಿದ್ದು, ನಗರದ ಆಸ್ಪತ್ರೆಗಳಲ್ಲಿ ಸಾವು ಪ್ರಕರಣಗಳು ಹೆಚ್ಚಾಗುತ್ತಿದೆ. 

ನಗರ ಮೂರು ಆಸ್ಪತ್ರೆಗಳಲ್ಲಿ ಸಾವು ಪ್ರಕರಣಗಳು ಹೆಚ್ಚಾಗಿದ್ದು, 41 ಸಾವುಗಳು ಸಂಭವಿಸಿವೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಅಪೋಲೋ ಆಸ್ಪತ್ರೆ ಒಂದರಲ್ಲಿಯೇ ಮೂವರು ಸಾವನ್ನಪ್ಪಿದ್ದು, ಮಿಂಟೋ ಕಣ್ಣು ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 34 ಸಾವು, ಬೌರಿಂಗ್ ಆಸ್ಪತ್ರೆಯಲ್ಲಿ 4 ಸಾವುಗಳು ಸಂಭವಿಸಿವೆ. 

ನಾರಾಯಣ ನೇತ್ರಾಲಯ ಮತ್ತು ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ಇತರೆ 7 ಆಸ್ಪತ್ರೆಗಳು ಮಾಹಿತಿಗಳನ್ನು ಹಂಚಿಕೆ ಮಾಡಿಲ್ಲ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com