ಕಾವೇರಿ ವನ್ಯಜೀವಿ ಅಭಯಾರಣ್ಯ ಸಮೀಪ ಡಿಕೆ ಸುರೇಶ್ ಜಮೀನಿನಲ್ಲಿ ನಿರ್ಮಾಣ ಕಾಮಗಾರಿ: ಪರಿಸರ ಸಂರಕ್ಷಣಾವಾದಿಗಳ ಆತಂಕ

ಕಾವೇರಿ ವನ್ಯಜೀವಿ ಅಭಯಾರಣ್ಯದ ಸಮೀಪವಿರುವ ಖಾಸಗಿ ಜಮೀನಿನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳ ಬಗ್ಗೆ ಸಂರಕ್ಷಣಾ ತಜ್ಞರು ಮತ್ತು ಸ್ಥಳೀಯರು ಚಿಂತಿತರಾಗಿದ್ದಾರೆ.
ಡಿ.ಕೆ ಸುರೇಶ್
ಡಿ.ಕೆ ಸುರೇಶ್

ಬೆಂಗಳೂರು: ಕಾವೇರಿ ವನ್ಯಜೀವಿ ಅಭಯಾರಣ್ಯದ ಸಮೀಪವಿರುವ ಖಾಸಗಿ ಜಮೀನಿನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳ ಬಗ್ಗೆ ಸಂರಕ್ಷಣಾ ತಜ್ಞರು ಮತ್ತು ಸ್ಥಳೀಯರು ಚಿಂತಿತರಾಗಿದ್ದಾರೆ.

ಅದರಲ್ಲೂ ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ, ಇಲ್ಲಿನ ಕಾಮಗಾರಿಯಿಂದಾಗಿ ನಿರಂತರವಾಗಿ ವಾಹನಗಳ ಸಂಚಾರ ನಡೆಯುತ್ತಿದೆ. ಇದರಿಂದ ವನ್ಯಜೀವಿಗಳಿಗೆ ಅಡಚಣೆ ಉಂಟಾಗುತ್ತಿದೆ. 

ನಿರ್ಮಾಣ ಕಾರ್ಯಗಳ ಸೋಗಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಕೂಡ ನಡೆಯುತ್ತಿದೆ ಎಂದು ಸಂರಕ್ಷಣಾ ತಜ್ಞರು ಮತ್ತು ಸ್ಥಳೀಯರು ಹೇಳುತ್ತಾರೆ, ಇದು ಸೂಕ್ಷ್ಮ ವನ್ಯಜೀವಿ ಕಾರಿಡಾರ್ ಮತ್ತು ನದಿ ಹಾದಿಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ.

ಕಾಮಗಾರಿ ನಡೆಯುತ್ತಿರುವ ಜಮೀನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಹೋದರ ಸಂಸದ ಡಿಕೆ ಸುರೇಶ್ ಅವರಿಗೆ ಸೇರಿದ್ದಾಗಿದೆ. ರಾಮನಗರ ಜಿಲ್ಲೆ ಉಯ್ಯಂಬಳ್ಳಿ ಹೋಬಳಿ ಆರಿ ಶಿವನಹಳ್ಳಿ ಗ್ರಾಮದಲ್ಲಿ ಸುರೇಶ್ ಅವರಿಗೆ ಸೇರಿದ 30 ಎಕರೆ ಜಮೀನಿನಲ್ಲಿ ಈ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಸದ್ಯ ಈ ಜಮೀನಿನಲ್ಲಿ ಕಂಪೌಂಡ್ ಗೋಡೆ ನಿರ್ಮಾಣ ಮಾಡಲಾಗುತ್ತಿದೆ, ಆದರೆ ಅಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ. ನಿರ್ಮಾಣ ಕಾರ್ಯಕ್ಕೆ ಅನುಮತಿ ಪಡೆಯದ ಕಾರಣ ಎಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಜಮೀನಿನಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಅಧಿಕ ಸಂಖ್ಯೆಯಲ್ಲಿ ಭಾರೀ ವಾಹನಗಳ ಸಂಚಾರ ನಿರಂತರವಾಗಿ ನಡೆಯುತ್ತಿದೆ, ಅವುಗಳನ್ನು ನಿರ್ಬಂಧಿಸಲು ಸಾಧ್ಯವಾಗುತ್ತಿಲ್ಲ, ಖಾಸಗಿ ಜಮೀನುಗಳಲ್ಲಿ ಗ್ರಾಮಸ್ಥರಿಗೆ ಸರಿಯಾದ ದಾರಿ ಇದ್ದಾಗ, ವಾಹನಗಳನ್ನು ಸಹ ನಿರ್ಬಂಧಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾಮಗಾರಿಯಿಂದ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ಆದರೆ ಈ ಜಾಗ ಪ್ರಭಾವಿಯೊಬ್ಬರಿಗೆ ಸೇರಿರುವ ಕಾರಣ ನಾವು ಅಸಹಾಯಕರಾಗಿದ್ದೇವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಡಿಕೆ ಸುರೇಶ್, ನನ್ನ ಜಮೀನಿಗೆ ಆನೆಗಳು ಮತ್ತು ಕಾಡು ಹಂದಿಗಳು ಬರದಂತೆ ಕಂಪೌಂಡ್ ಹಾಕುತ್ತಿದ್ದೇನೆ, ಈ ಜಮೀನಿನಲ್ಲಿ ತೋಟಗಾರಿಕೆ ಮತ್ತು ಕೃಷಿ ಕಾರ್ಯ ನಡೆಯುತ್ತದೆ, ನಿರ್ಮಾಣ ಕಾಮಗಾರಿಗಾಗಿ ಎಂ-ಮರಳನ್ನು ಬಳಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com