ಕೊರೋನಾ ಸೋಂಕಿನಿಂದ ಅಗಲಿದ ವಕೀಲರು, ಸಿಬ್ಬಂದಿಗೆ ಹೈಕೋರ್ಟ್ ನಲ್ಲಿ ಶ್ರದ್ಧಾಂಜಲಿ
ಮಹಾಮಾರಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದ 218 ವಕೀಲರು ಮತ್ತು ನ್ಯಾಯಾಲದ 29 ಸಿಬ್ಬಂದಿಗಳಿಗೆ ಮಂಗಳವಾರ ಹೈಕೋರ್ಟ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published: 02nd June 2021 08:38 AM | Last Updated: 02nd June 2021 01:40 PM | A+A A-

ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು
ಬೆಂಗಳೂರು: ಮಹಾಮಾರಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದ 218 ವಕೀಲರು ಮತ್ತು ನ್ಯಾಯಾಲದ 29 ಸಿಬ್ಬಂದಿಗಳಿಗೆ ಮಂಗಳವಾರ ಹೈಕೋರ್ಟ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠದ ಆವರಣದಲ್ಲಿ ಬೆಳಗ್ಗೆ 2 ನಿಮಿಷಗಳ ಕಾಲ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ, ಹಿರಿಯ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಅರವಿಂದ್ ಕುಮಾರ್ ಸೇರಿದಂತೆ ಎಲ್ಲಾ ನ್ಯಾಯಮೂರ್ತಿಗಳು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಮೃತ ವಕೀಲರ ಮತ್ತು ನ್ಯಾಯಾಲಯದ ಸಿಬ್ಬಂದಿಗೆ ನಿಧನಕ್ಕೆ ಸಂತಾಪ ಸೂಚಿಸಿದರು. ಜೊತೆಗೆ, ಸೋಂಕು ತಗುಲದಂತೆ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
2020ರ ಜುಲೈ 20 ರಂದು ಸಿಬ್ಬಂದಿಯೊಬ್ಬರು ಕೊರೋನಾದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರಿಗೆ ನ್ಯಾಯಮೂರ್ತಿ ಎ.ಎಸ್.ಓಕ ಅವರು ಗುಲಾಬಿ ನೀಡಿ ಸ್ವಾಗತಿಸಿದ್ದರು. ಈ ಘಟನೆ ಹಲವರ ಗಮನ ಸೆಳೆದಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು, ಈ ವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ನ್ಯಾಯಾಧೀಶರು ಹಾಗೂ ಇತರೆ ಪದಾಧಿಕಾರಿಗಳು ಕೋರ್ಟ್ ಹಾಲ್-1 ರಲ್ಲಿ ಸಭೆ ಸೇರುತ್ತಿದ್ದರು. ಮಾಜಿ ನ್ಯಾಯಾಧೀಶಕರು, ಹಿರಿಯ ಸಲಹೆಗಾರರ ಸಾವಿಗೆ ಸಂತಾಪ ಸೂಚಿಸುತ್ತಿದ್ದರು. ಆದರೆ, ಇದೀಗ ನ್ಯಾಯಮೂರ್ತಿಗಳು ಸಾಮೂಹಿಕವಾಗಿ ಸಂತಾಪ ಸೂಚಿಸುವ ಮೂಲಕ ಆ ಸಂಪ್ರದಾಯವನ್ನು ಮುರಿದಿದ್ದಾರೆ. ಇದು ದುಃಖದಲ್ಲಿರುವ ಕುಟುಂಬಕ್ಕೆ ಕೊಂಚ ಮಟ್ಟಿಗಾದರೂ ಸಮಾಧಾನ ತರಲಿದೆ ಎಂದು ಹೇಳಿದ್ದಾರೆ.
ಅಗಲಿದ ಸಿಬ್ಬಂದಿಗಳಿಗೆ ಸಂತಾಪ ಸೂಚಿಸಿದ ಬಳಿಕ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾದ ರಂಗನಾಥ್ ಅವರು, ಸಂಕಷ್ಟದಲ್ಲಿರುವ ವಕೀಲರಿಗೂ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿಕೊಂಡರು. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿರುವ ಮಹಿಳಾ ವಕೀಲರಿಗೆ ನೆರವು ನೀಡಬೇಕೆಂದು ಮನವಿ ಮೈಾಡಿಕೊಂಡರು. ಅಲ್ಲದೆ, ಸೋಂಕಿನಿಂದ ಸಾವನ್ನಪ್ಪಿದ ವಕೀಲರ ಕುಟುಂಬಗಳಿಗೆ ಪರಿಹಾರ ನೀಡುವಂತೆಯೂ ಮನವಿ ಮಾಡಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಗನಾಥ್ ಅವರು, ಸಚಿವ ಪರಿಹಾರ, ನೆರವು ನೀಡುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.