ತಡವಾದರೂ 10, 12ನೇ ತರಗತಿ ಪರೀಕ್ಷೆ ನಡೆಸಿ: ರಾಜ್ಯ ಸರ್ಕಾರಕ್ಕೆ ಗ್ರಾಮೀಣ ಖಾಸಗಿ ಶಾಲೆಗಳ ಆಗ್ರಹ

ಕೋವಿಡ್​ ಸಾಂಕ್ರಾಮಿಕತೆ ಹಿನ್ನಲೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಿಬಿಎಸ್ಇ, ಐಸಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಕಾದು ನೋಡುವ ನಿರ್ಧಾರಕ್ಕೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್​ ಸಾಂಕ್ರಾಮಿಕತೆ ಹಿನ್ನಲೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಿಬಿಎಸ್ಇ, ಐಸಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಕಾದು ನೋಡುವ ನಿರ್ಧಾರಕ್ಕೆ ಬಂದಿದೆ. ಈ ನಡುವಲ್ಲೇ ವಿದ್ಯಾರ್ಥಿಗಳಿಂದ ಪರೀಕ್ಷೆ ರದ್ದು ಮಾಡುವಂತೆ ಆಗ್ರಹಗಳು ಕೇಳಿಬರುತ್ತಿದ್ದು, ಗ್ರಾಮೀಣ ಭಾಗದ ಖಾಸಗಿ ಶಾಲೆಗಳು ತಡವಾದರೂ 10, 12ನೇ ತರಗತಿ ಪರೀಕ್ಷೆ ನಡೆಸುವಂತೆ ಆಗ್ರಹಿಸುತ್ತಿವೆ. 

ಈ ಕುರಿತು 250 ಪದವಿ ಪೂರ್ವ ಕಾಲೇಜುಗಳ ಅಭಿಪ್ರಾಯವನ್ನು ಖಾಸಗಿ ಶಾಲೆಗಳ ಒಕ್ಕೂಟ (ರೂಪ್ಸಾ) ಸಂಗ್ರಹಿಸಿದೆ. ಅಭಿಪ್ರಾಯ ನೀಡಿರುವ ಕಾಲೇಜುಗಳು, ಎಲ್ಲಾ ಪಿಯು ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿ, ಮತ್ತು ಆ ಮೂಲಕ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಿ. ಪರೀಕ್ಷಾ ಕೇಂದ್ರಕ್ಕೆ ಬರುವ ಪರಿವೀಕ್ಷಕರು ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ತಿಳಿಸಿವೆ. 

ಕರ್ನಾಟಕ ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೆ ಗೌಡ ಅವರು ಮಾತನಾಡಿ, ಮಾರ್ಚ್ ಮೊದಲ ವಾರದಲ್ಲಿ ಮಧ್ಯಂತರ ಪರೀಕ್ಷೆಗಳು ಮತ್ತು ಯುನಿಟ್ ಪರೀಕ್ಷೆಗಳು ಆಫ್‌ಲೈನ್‌ನಲ್ಲಿ ನಡೆಸಲಾಗಿದೆ. ಪಠ್ಯಕ್ರಮ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ 50 ಅಂಕಗಳಿಗೆ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದ್ದಾರೆ, ಅವುಗಳನ್ನು ಮೌಲ್ಯಮಾಪನಕ್ಕೆ ಬಳಸಬಹುದು. ಪಕ್ಷಪಾತವಿಲ್ಲದಂತೆ ಮಾಡಲು ಅಂಕಗಳ ಬದಲಿಗೆ ಸರ್ಕಾರ ಗ್ರೇಡ್ ವ್ಯವಸ್ಥೆ ಬಳಸುವುದು ಸೂಕ್ತ ಎನಿಸುತ್ತದೆ ಎಂದು ಹೇಳಿದ್ದಾರೆ. 

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಅವರು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪರೀಕ್ಷೆ ಕಡ್ಡಾಯವಾಗಿದೆ. ಆದರೆ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ಬಳಿಕ ಪರೀಕ್ಷೆಯನ್ನು ನಡೆಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಕುರಿತು ಇನ್ನೂ ಚರ್ಚೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ. 

ಈ ವರ್ಷದ ಶಿಕ್ಷಣ ಇಲಾಖೆಯ ಗಮನವು ಕಲಿಕೆಯ ನಿರಂತರತೆಯ ಮೇಲೆ ಇತ್ತು . ವಿದ್ಯಾರ್ಥಿಗಳ ಫಲಿತಾಂಶ ನಿರ್ಣಿಯಿಸಲು ಈ ವರ್ಷ ಯಾವುದೇ ಪರೀಕ್ಷೆಗಳೂ ನಡೆದಿಲ್ಲ. ಉದಾಹರಣೆಗೆ, ಡಿಡಿಪಿಐ ಕಚೇರಿ ಜಿಲ್ಲಾ ಮಟ್ಟದ ಪರೀಕ್ಷೆಯನ್ನು ನಡೆಸಿತ್ತು, ಇದು ಪೂರ್ವಸಿದ್ಧತೆಗೆ ಹೋಲುತ್ತದೆ. ಕೆಲವರು ವಾಟ್ಸಾಪ್ ಮತ್ತು ಕೆಲವು ಆನ್‌ಲೈನ್ ಮೋಡ್ ಮೂಲಕ ಪರೀಕ್ಷೆಯನ್ನು ತೆಗೆದುಕೊಂಡರು, ಆದರೆ ಅದು ಸ್ಥಳೀಯ ಪರೀಕ್ಷೆಯಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಮಾತನಾಡಿ, ಯಾವ ಆಧಾರದ ಮೇಲೆ ಫಲಿತಾಂಶ ನಿರ್ಣಯಿಸುತ್ತಾರೆಂಬುದು ನಮಗೆ ತಿಳಿಯುತ್ತಿಲ್ಲ. ಪರೀಕ್ಷೆಗೆ ಉತ್ತಮವಾಗಿ ಸಿದ್ಧತೆ ನಡೆಸಿದ್ದೆ. ಆದರೆ, ಇಂದು ನಡೆದ ಅಂತರ್ ಜಿಲ್ಲಾ ವಿದ್ಯಾರ್ಥಿಗಳ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಕಳೆದುಕೊಳ್ಳುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ನನ್ನ ಮನಸ್ಸು ಕೂಡ ಬದಲಾಗುತ್ತಿದೆ ಎಂದು ಹೇಳಿದ್ದಾರೆ. 

ಇಲ್ಲಿಯವರೆಗೆ ಯಾವುದೇ ಪರೀಕ್ಷೆಗಳೂ ಕೂಡ ನಡೆದಿಲ್ಲ. ಲಾಕ್ಡೌನ್ ಪೂರ್ವಸಿದ್ಧತಾ ಪರೀಕ್ಷೆಯ ಮೇಲೂ ಪರಿಣಾಮ ಬೀರಿದೆ. ಕಳೆದ 2 ತಿಂಗಳುಗಳಿಂದ ನಡೆದ ಆಫ್'ಲೈನ್ ತರಗತಿಗಳು ಪಠ್ಯಕ್ರಮ ಪೂರ್ಣಗೊಳಿಸುವ ಉದ್ದೇಶದಿಂದ ಕೂಡಿತ್ತು. ಪರೀಕ್ಷೆಗಳನ್ನು ನಡೆಸಲಾಗಿಲ್ಲ. ಇನ್ನೂ ಕೆಲವು ಕಾಲೇಜುಗಳಲ್ಲಿ ಪಠ್ಯಕ್ರಮಗಳನ್ನೇ ಪೂರ್ಣಗೊಳಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. 

ಬಹುಸಂಖ್ಯಾತ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು, ರಾಜ್ಯ ಸರ್ಕಾರ 10 ಮತ್ತು 12 ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಸಂಘಟನೆ ಹೇಳಿದೆ. ಅಲ್ಲದೆ, ತಜ್ಞರು ಮತ್ತು ಹಿರಿಯ ಅಧ್ಯಾಪಕರೊಂದಿಗೆ ಮಾತುಕತೆ ನಡೆಸಿದ ಬಳಿಕ ವೈಜ್ಞಾನಿಕ ಮೌಲ್ಯಮಾಪನ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. 

ಈ ನಡುವೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿ, ಎಸ್ಎಸ್ಎಲ್'ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಬಗ್ಗೆ ಶೀಘ್ರಗತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com