ಕೊಡಗಿನ ಏರೋನಾಟಿಕಲ್ ವಿದ್ಯಾರ್ಥಿ ಗುಜರಾತಿನಲ್ಲಿ ಸಂಶಯಾಸ್ಪದ ಸಾವು

ಪೈಲೆಟ್ ಆಗುವ ಕನಸು ಹೊತ್ತು ಮಡಿಕೇರಿಯಿಂದ ಗುಜರಾತಿನ ಅಹಮದಾಬಾದ್ ಗೆ ತೆರಳಿ ತರಬೇತಿ ಪಡೆಯುತ್ತಿದ್ದ ಯುವಕನೊಬ್ಬ ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.
ಶಿಬಿ ಬೋಪಯ್ಯ
ಶಿಬಿ ಬೋಪಯ್ಯ

ಮಡಿಕೇರಿ: ಪೈಲೆಟ್ ಆಗುವ ಕನಸು ಹೊತ್ತು ಮಡಿಕೇರಿಯಿಂದ ಗುಜರಾತಿನ ಅಹಮದಾಬಾದ್ ಗೆ ತೆರಳಿ ತರಬೇತಿ ಪಡೆಯುತ್ತಿದ್ದ ಯುವಕನೊಬ್ಬ ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.

ಕೊಡಗು ಸುಂಟಿಕೊಪ್ಪದ ಸಮೀಪದ ಮಾದಾಪುರ ಜಂಬೂರುಬಾಣೆ ಯುವಕ ಶಿಬಿ ಬೋಪಯ್ಯ (23) ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿರುವ ಯುವಕ. ಈತ ಜೂನ್ 4ರಂದು ಅಹಮದಾಬಾದ್ ನಲ್ಲಿ ಆತ್ಮಹತ್ಯೆಗೆ ಶರಣಾದನೆಂದು ಹೇಳಲಾಗಿದೆ.

ಸುಂಟಿಕೊಪ್ಪ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬೋಪಯ್ಯ ಹಾಗೂ ಸರ್ಕಾರಿ ಶಾಲಾ ಶಿಕ್ಷಕಿ ಪೊನ್ನಮ್ಮ ಅವರ ಪುತ್ರನಾದ ಶಿಬಿ ಬೋಪಯ್ಯ ಅಹಮದಾಬಾದ್ ನ ಏರೋನಾಟಿಕ್ ಸೆಂಟರ್ ನಲ್ಲಿ ಅಂತಿಮ ವರ್ಷದ ತರಬೇತಿ ಪಡೆಯುತ್ತಿದ್ದನು. ಇನ್ನು ಕೇವಲ ಮೂರು ತಿಂಗಳಲ್ಲಿ ಅವನ ತರಬೇತಿ ಅಂತ್ಯವಾಗಿ ಪೈಲೆಟ್ ಆಗುವ ಕನಸು ಹೊತ್ತಿದ್ದ,  ಆದರೆ ಶುಕ್ರವಾರ ಕಾಲೇಜಿನ ಸಮೀಪದ ಕಾಡಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಾವಿನ ಸುತ್ತ ಅನೇಕ ಅನುಮಾನಗಳು ಎದ್ದಿದೆ.

ಮೇ ತಿಂಗಳಿನಲ್ಲೇ ತರಬೇತಿ ಮುಗಿದು ಈತ ಪೈಲೆಟ್ ಆಗಬೇಕಿತ್ತು. ಆದರೆ ಲಾಕ್ ಡೌನ್ ಆಗಿದ್ದ ಕಾರಣ ತರಬೇತಿ ಅವಧಿ ಮುಂದೂಡಿಕೆಯಾಗಿತ್ತು. "ತಾನು ಶೀಘ್ರವೇ ತರಬೇತಿ ಮುಗಿಸಿ ಬರುವುದಾಗಿ" ಶಿಬಿ ಪ್ರತಿದಿನ ರಾತ್ರಿ ಊಟದ ಸಮಯ ಪೋಷಕರಿಗೆ ವಿಡಿಯೋ ಕಾಲ್ ಮೂಲಕ ಕರೆ ಮಾಡಿ ಹೇಳುತ್ತಿದ್ದನೆನ್ನಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಯುವಕ ಶಿಬಿಯ ಕಿವಿಯಲ್ಲಿ ಇಯರ್ ಫೋನ್, ಕೈನಲ್ಲಿ ವಾಚ್ ಹಾಗೂ ಕಾಲಿಗೆ ಶೂ ಧರಿಸಿರುವುದನ್ನು ಕಂಡು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. 

ಶಿಬಿ ಪೋಷಕರು ಇದಾಗಲೇ ಗುಜರಾತಿಗೆ ತೆರಳಿದ್ದು ಘಟನೆ ಸಂಬಂಧ ಅಹಮದಾಬಾದ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com