ರಾಜ್ಯಕ್ಕೆ ಮುಂಗಾರು ಅಧಿಕೃತ ಪ್ರವೇಶ: ಮೊದಲ ದಿನವೇ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

ಕೇರಳ ಪ್ರವೇಶಿಸಿರುವ ನೈಋತ್ಯ ಮುಂಗಾರು ಮಾರುತಗಳು ಶುಕ್ರವಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ಆಗಮಿಸಿದ್ದು, ಶನಿವಾರ ಉತ್ತರ ಒಳನಾಡನ್ನು ವ್ಯಾಪಿಸಲಿವೆ. ಇದರೊಂದಿಗೆ ರಾಜ್ಯದಲ್ಲಿ 4 ತಿಂಗಳ ಮಳೆಗಾಲ ಅಧಿಕೃತವಾಗಿ ಆರಂಭವಾಗಲಿದೆ. 
ಬೆಂಗಳೂರಿನಲ್ಲಿ ಮಳೆ
ಬೆಂಗಳೂರಿನಲ್ಲಿ ಮಳೆ

ಬೆಂಗಳೂರು: ಕೇರಳ ಪ್ರವೇಶಿಸಿರುವ ನೈಋತ್ಯ ಮುಂಗಾರು ಮಾರುತಗಳು ಶುಕ್ರವಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ಆಗಮಿಸಿದ್ದು, ಶನಿವಾರ ಉತ್ತರ ಒಳನಾಡನ್ನು ವ್ಯಾಪಿಸಲಿವೆ. ಇದರೊಂದಿಗೆ ರಾಜ್ಯದಲ್ಲಿ 4 ತಿಂಗಳ ಮಳೆಗಾಲ ಅಧಿಕೃತವಾಗಿ ಆರಂಭವಾಗಲಿದೆ. 

ವಾಡಿಕೆಯಂತೆ ಜೂನ್ 1ರಂದೇ ಪ್ರವೇಶವಾಗಬೇಕಿದ್ದ ಮುಂಗಾರು ಮಾರುತಗಳು ನಾಲ್ಕು ದಿನ ತಡವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳನ್ನು ಪ್ರವೇಶಿಸಿವೆ. 

ಶನಿವಾರ ಉತ್ತರ ಒಳನಾಡನ್ನು ಹಾದು ಹೋಗುವ ಮೂಲಕ ಈ ಮಾರುತಗಳು ಇಡೀ ರಾಜ್ಯ ಆವರಿಸಲಿವೆ ಎಂದು ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಹೇಳಿದ್ದಾರೆ. 

ಮುಂಗಾರು ಆರಂಭವಾದ ಮೊದಲ ದಿನವೇ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ದಾಖಲಾಗಿದೆ. ಇದೇ ರೀತಿ ಜೂ.6ರವರೆಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆಗಳಲ್ಲಿ ಗುಡುಗು ಮತ್ತು ಗಾಳಿ ಸಹಿತ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. 

ಜೂನ್ 5 ರಂದು ಅತ್ಯಧಿಕ ಮಳೆ ಬೀಳುವುದರಿಂದ ಉಡುಪಿ, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸುವ ಹವಾಮಾನ ಇಲಾಖೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ. 

ಶುಕ್ರವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಅಂಕಿ – ಅಂಶದ ಪ್ರಕಾರ, ರಾಜ್ಯದಲ್ಲಿ ನಿನ್ನೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ. ರಾಜ್ಯದಲ್ಲಿ ನಿನ್ನೆ ಒಟ್ಟಾರೆ 37.2 ಎಂಎಂ ಮಳೆಯಾಗಿದೆ. ಇದು ಶೇ.115 ಪಟ್ಟು ಹೆಚ್ಚಿನ ಮಳೆಯೆಂದು ಹೇಳಲಾಗುತ್ತಿದೆ. 

ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆ 5.30ರವರೆಗೂ 9 ಎಂಎಂ ಮಳೆಯಾಗಿದ್ದು, ರಾತ್ರಿ 8.30ರವರೆಗೆ 12.4 ಎಂಎಂ ಮಳೆಯಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 5.30ರವರೆಗೆ 25.6 ಎಂಎಂ ಮಳೆಯಾಗಿದ್ದು, ಹೆಎಎಲ್ ವಿಮಾನ ನಿಲ್ದಾಣದಲ್ಲಿ ರಾತ್ರಿ 8.30ರ ವೇಳೆಗೆ 44.2ಎಂಎಂ ಮಳೆಯಾಗಿದೆ. 

ರಾಜ್ಯದಲ್ಲಿ ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜೂ.7ರವರೆಗೂ ಮಳೆ ಮುಂದುವರೆಯಲಿದೆ. ಜೂ.5 ಹಾಗೂ 6 ರಂದು ಗುಡುಗು ಸಹಿತ ಜೋರು ಮಳೆ ಬೀಳಲಿದೆ. ನಂತರ ಜೂ.7 ರಂದು ಮಳೆ ಅಬ್ಬರ ತುಸು ಕಡಿಮೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ಉಸ್ತುವಾರಿ ನಿರ್ದೇಶಕಿ ಗೀತಾ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com